ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಷಯರೋಗದಿಂದ ಬಳಲಿ ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು.
ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ. ಸದ್ಯ ಆರೋಗ್ಯದ ಸ್ಥಿತಿಯಲ್ಲಿ ಸುಧಾರಿಸಿದೆ. ನಾನು ಚಿತ್ರರಂಗವನ್ನು 2 ದಶಕಗಳ ಹಿಂದೆ ಬಿಟ್ಟಿದ್ದೆ. ಆದರೆ ಈಗ ನಾನು ಹಿಂದಿರುಗಲು ಇಷ್ಟಪಡುತ್ತೇನೆ. ಕಿರುತೆರೆ, ಬೆಳ್ಳಿತೆರೆ ಅಥವಾ ಡಿಜಿಟಲ್ ಮೀಡಿಯಾದಲ್ಲಿ ನನಗಾಗುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು.
ನಾನು ಅನಾರೋಗ್ಯದಿಂದ ಬಳಲುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಆಗ ಸಲ್ಮಾನ್‍ಗೆ ನನ್ನ ಬಗ್ಗೆ ತಿಳಿದು ಅವರು ನನಗೆ ಸಹಾಯ ಮಾಡಿದ್ದರು. ಅವರ ಸಂಸ್ಥೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದರು. ಆದರೆ ನಾನು ಶಿವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದೆ. ಏಕೆಂದರೆ ಅಲ್ಲಿ ಕಾಯಿಲೆ ತುಂಬಾ ಬೇಗ ಗುಣವಾಗುತ್ತೆ ಎಂದು ಕೇಳಿದ್ದೆ. ಸಲ್ಮಾನ್ ಸಂಸ್ಥೆ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯನ್ನಾಗಿ ಮಾಡಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಪೂಜಾ ಹೇಳಿದ್ದಾರೆ.
ನಾನು ಆಸ್ಪತ್ರೆಯಲ್ಲಿದ್ದಾಗ 2 ದಿನದಲ್ಲಿ 9 ಮಂದಿ ಮೃತಪಟ್ಟಿರುವುದನ್ನು ನೋಡಿದೆ. ಅವರು ಮೃತಪಟ್ಟಾಗ ಈಗ ನನ್ನ ಸರದಿ ಎಂದು ಎನಿಸುತ್ತಿತ್ತು. ಆದರೆ ಸಲ್ಮಾನ್ ನನಗೆ ಹೊಸ ಜೀವನವನ್ನು ನೀಡಿದ್ದಾರೆ. ನಾನು ಈಗ ಬದುಕುವುದನ್ನು ಕಲಿತಿದ್ದು, ಮತ್ತೆ ನಟನೆ ಮಾಡುತ್ತೇನೆ. ನನ್ನ ಸಂಪಾದನೆಯಿಂದ ಒಂದು ಮನೆ ಕಟ್ಟಿಸಿ ದೇವರ ಫೋಟೋ ಬದಲು ಸಲ್ಮಾನ್ ಫೋಟೋ ಇಟ್ಟು ಪೂಜೆ ಮಾಡುತ್ತೇನೆ. ಈಗ ಸಲ್ಮಾನ್‍ರನ್ನು ಭೇಟಿ ಮಾಡಿ ಅವರ ಕಾಲು ಮುಟ್ಟಿ ಧನ್ಯವಾದ ತಿಳಿಸಬೇಕು ಎಂದು ಪೂಜಾ ಹೇಳಿದ್ದಾರೆ.