ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು ಮಾಡಬೇಕಾಗುತ್ತದೆ. ಅಸ್ಸಾಂ ಪೊಲೀಸರು ದಾರಂಗಿ ಜಿಲ್ಲೆಯಲ್ಲಿ ಈ ಮಕ್ಕಳ ತಾಯಂದಿರು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ಹೋಗಿದ್ದರು. ಈ ವೇಳೆ ಅವರವರ ಮಕ್ಕಳನ್ನು ಇಬ್ಬರು ಪೇದೆಗಳು ನೋಡಿಕೊಂಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ನವೆಂಬರ್ 10ರಂದು ಅಸ್ಸಾಂನಲ್ಲಿ ಈ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಶಿಕ್ಷಕರು ಮೊದಲನೇ ತರಗತಿಯಿಂದ 8 ನೇತರಗತಿವರೆಗೂ ಕಲಿಸಲು ಅರ್ಹರಾಗುತ್ತಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಲವು ಮಂದಿ ಪೇದೆಗಳನ್ನು ಹೊಗಳಿದ್ದಾರೆ. ಕೆಲವರು ‘ಸೆಲ್ಯೂಟ್’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಸೆಲ್ಯೂಟ್ಮ್ಯಾಮ್. ನೀವು ಸೂಪರ್ ಮೇಡಂ’ ಎಂದು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.