ಗಗನಮುಖಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಬಹುತೇಕ ವಾಹನ ಖರೀದಿದಾರರು ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುತ್ತಿದ್ದು, ಹೀಗಿರುವಾಗ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ನಿಂದ ಪೆಟ್ರೋಲ್ ಸಿದ್ದಪಡಿಸಿರುವ ಎಂಜಿನಿಯರ್ ಒಬ್ಬರು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಹೌದು, ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ದಿನಗಳಲ್ಲಿ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಉತ್ಪಾದನೆ ಮಾಡಬಲ್ಲ ಹೊಸ ತಂತ್ರಜ್ಞಾನವನ್ನು ಸಿದ್ದಪಡಿಸಿದ್ದು, ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಅನ್ನೇ ಬಳಕೆ ಮಾಡಿಕೊಂಡು ಈ ಹೊಸ ಆವಿಷ್ಕಾರವನ್ನು ಮಾಡಲಾಗಿದೆ. ಹೈದ್ರಾಬಾದ್ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಪ್ರೋ. ಸತೀಶ್ ಎನ್ನುವರೇ ಇದರ ರೂವಾರಿಯಾಗಿದ್ದು, ನಗರದಲ್ಲಿ ದಿನಂಪ್ರತಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಪೆಟ್ರೋಲ್ ಸಿದ್ದಪಡಿಸುತ್ತಿದ್ದಾರೆ.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಸಮಸ್ಯೆಯನ್ನು ತಗ್ಗಿಸುವುದು ಹೇಗೆ ಪ್ರಶ್ನೆ ಮುಂದಿಟ್ಟು ಹೊಸ ಪ್ರಯತ್ನ ನಡೆಸುತ್ತಿದ್ದಾಗಲೇ ಪೆಟ್ರೋಲ್ ಉತ್ಪಾದನೆ ಸಾಧ್ಯತೆ ಕುರಿತು ಎಂಜಿನಿಯರ್ ಸತೀಸ್ ಅವರು ಹೊಸ ಪ್ರಯೋಗ ಮಾಡಿ ಇಂತದೊಂದು ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತಾಜ್ಯವನ್ನು ಪ್ರಮುಖ ಮೂರು ಹಂತಗಳಲ್ಲಿ ರಸಾಯನಿಕ ಪ್ರಕ್ರಿಯೆಗಳ ಮೂಲಕ ಸಂಸ್ಕರಿಸಿ ಮಾಡಿದ ನಂತರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನವನ್ನು ಸಿದ್ದಪಡಿಸಲಾಗಿದ್ದು, ಪರಿಸರಕ್ಕೆ ಮಾರಕವಾಗದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಈ ಹೊಸ ಪೆಟ್ರೋಲ್ ಮಾದರಿಯನ್ನು ಸಿದ್ದಗೊಳಿಸಲಾಗಿದೆ.
2016ರಿಂದಲೇ ಎಂಜಿನಿಯರ್ ಸತೀಶ್ ಅವರು ಈ ಪ್ರಯೋಗ ಮಾಡುತ್ತಿದ್ದು, ಪ್ರತಿ ದಿನ ಕನಿಷ್ಠ 200 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಕನಿಷ್ಠ 200 ಲೀಟರ್ ಪೆಟ್ರೋಲ್ ಉತ್ಪಾದನೆ ಮಾಡುತ್ತಿದ್ದಾರೆ. ಕಳೆದ ಮೂರುವರೇ ವರ್ಷಗಳಲ್ಲಿ ಬರೋಬ್ಬರಿ 50 ಟನ್ ಪ್ಲಾಸ್ಟಿಕ್ ಅನ್ನು ಪೆಟ್ರೋಲ್ ಆಗಿ ಪರಿವರ್ತನೆ ಮಾಡಿರುವ ಪ್ರೋ. ಸತೀಸ್ ಅವರು, ಅತಿ ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ.
ಪ್ರತಿ ಲೀಟರ್‌ಗೆ ರೂ. 40ರಿಂದ ರೂ. 50 ಮಾತ್ರ..! ಸದ್ಯ ಪ್ರೋ. ಸತೀಶ್ ಅವರು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ ರೂ.40ರಿಂದ ರೂ.50ಕ್ಕೆ ಮಾರಾಟ ಮಾಡುತ್ತಿದ್ದು, ಸ್ಥಳೀಯ ಕೈಗಾರಿಕಾ ಕೇಂದ್ರಗಳೇ ಇದರ ಪ್ರಮುಖ ಗ್ರಾಹಕರಾಗಿದ್ದಾರೆ.ವಾಹನಗಳಲ್ಲಿ ಬಳಕೆ ಯೋಗ್ಯವೇ? ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಲ್ಲಿ ಬಳಕೆ ಕುರಿತಂತೆ ಹಲವು ಪ್ರಯತ್ನಗಳು ನಡೆದಿದ್ದರೂ ಇದುವರೆಗೂ ಅಧಿಕೃತವಾದ ಟೆಸ್ಟಿಂಗ್ ನಡೆಸಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಕುರಿತು ಅಧಿಕೃತ ಟೆಸ್ಟಿಂಗ್ ನಡೆಸಿದ ನಂತರವಷ್ಟೇ ಇದು ವಾಹನಗಳಲ್ಲಿ ಬಳಕೆಗೆ ಯೋಗ್ಯವೇ ಎಂಬುದು ತಿಳಿದು ಬರಲಿದೆ.
ಸದ್ಯಕ್ಕೆ ಕೈಗಾರಿಕೊದ್ಯಮದಲ್ಲಿ ಮಾತ್ರವೇ ಈ ತೈಲ ಉತ್ಪನ್ನ ಬಳಕೆ ಮಾಡಲಾಗುತ್ತಿದ್ದು, ಒಂದು ವೇಳೆ ವಾಹನಗಳಲ್ಲಿಯೂ ಬಳಕೆಗೆ ಯೋಗ್ಯ ಎಂದಾದಲ್ಲಿ ಇದೊಂದು ಮಹತ್ವದ ಯೋಜನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ ದೇಶಾದ್ಯಂತ ದಿನಂಪ್ರತಿ ಉತ್ಪಾದನೆಯಾಗುವ ಸಾವಿರಾರು ಟನ್ ಪ್ಲಾಸ್ಟಿಕ್ ತ್ಯಾಜ್ಯಕ್ಕೂ ಮುಂದೊಂದು ದಿನ ಭಾರೀ ಬೇಡಿಕೆ ಬಂದರೂ ಅಚ್ಚರಿಯಿಲ್ಲ.