ಬಾಯಿಗೆ ರುಚಿ ನೀಡುವ ಹಣ್ಣು ಪಪ್ಪಾಯ. ಇದ್ರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಒಂದು ಬೌಲ್ ಪಪ್ಪಾಯ ಸೇವನೆ ಮಾಡ್ತಾರೆ. ಪ್ರತಿದಿನ ಬೆಳಿಗ್ಗೆ ಪಪ್ಪಾಯ ತಿನ್ನುವವರು ಪಪ್ಪಾಯ ತಿನ್ನದಿರುವವರಿಗಿಂತ ಆರೋಗ್ಯವಾಗಿರುತ್ತಾರೆ. ಖಾಯಿಲೆಗೆ ತುತ್ತಾಗುವುದು ಕಡಿಮೆ. ಹಾಗೆ ಕಚೇರಿಯಲ್ಲಿ ಉತ್ತಮ ಕೆಲಸ ಮಾಡಲು ಉತ್ಸಾಹಿತರಾಗಿರುತ್ತಾರೆ.
ಪಪ್ಪಾಯಿಯಲ್ಲಿ ವಿಟಮಿನ್ ಹಾಗೂ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ದೇಹಕ್ಕೆ ಕಡಿಮೆಯಾಗಿರುವ ನೀರಿನ ಅಂಶವನ್ನು ಇದು ನೀಡುವುದಲ್ಲದೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.
ಪಪ್ಪಾಯಿಯಲ್ಲಿ ಕೊಬ್ಬಿನಂಶವಿರುವುದಿಲ್ಲ. ಇದು ಶಕ್ತಿಯ ಒಂದು ಮೂಲ. ಇದ್ರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಎಷ್ಟು ಪಪ್ಪಾಯಿ ಸೇವನೆ ಮಾಡಿದ್ರೂ ನಿಮ್ಮ ತೂಕ ಹೆಚ್ಚಾಗುವುದಿಲ್ಲ. ಜೀರ್ಣಶಕ್ತಿಗೂ ಇದು ಒಳ್ಳೆಯದು.
ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಟಾ-ಕ್ಯಾರೋಟಿನ್ ಇದ್ದಲ್ಲಿ ಅಸ್ತಮಾ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಪಪ್ಪಾಯದಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಹೆಚ್ಚಿರುತ್ತದೆ. ಇದು ಅಸ್ತಮಾವನ್ನು ನಿಯಂತ್ರಿಸುತ್ತದೆ.
ಪಪ್ಪಾಯಿಯಲ್ಲಿ ವಿಟಮಿನ್ ಎ, ಬಿ, ಸಿ ಅಂಶವಿರುತ್ತದೆ. ಇದು ಶರೀರದಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪಪ್ಪಾಯಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ತಾಮ್ರ ಹೇರಳವಾಗಿರುತ್ತದೆ. ಸಂಧಿವಾತ ಸಮಸ್ಯೆಯಿದ್ದವರು ಪಪ್ಪಾಯ ಸೇವನೆ ಮಾಡುವುದು ಬಹಳ ಮುಖ್ಯ. ಹೃದಯ ಸಂಬಂಧಿ ಖಾಯಿಲೆಗಳನ್ನು ಇದು ದೂರ ಮಾಡುತ್ತದೆ.
ಪಪ್ಪಾಯಿ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಅದರ ರಸ ತೆಗೆದು ಕುಡಿಯುತ್ತ ಬಂದಲ್ಲಿ ದೇಹದಲ್ಲಿರುವ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಾಗುತ್ತದೆ. ಡೆಂಗ್ಯೂನಿಂದ ಬಳಲುತ್ತಿರುವವರಿಗೆ ಇದು ಹೇಳಿ ಮಾಡಿಸಿದ ಮದ್ದು.