ಸುದ್ದಿ

ಪೂರ್ಣ ಯುದ್ಧ ಸಂಭವ:ಭಾರತಕ್ಕೆ ಪಾಕ್ ಎಚ್ಚರ…..!

By admin

August 07, 2019

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ಸರ್ಕಾರದ ಕ್ರಮಕ್ಕೆ ಪಾಕಿಸ್ತಾನದಿಂದ ವಿರೋಧ ವ್ಯಕ್ತವಾಗಿದೆ. ಈ ಕ್ರಮ ಅಕ್ರಮವೆಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.ಭಾರತ ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡಿರುವ ಕ್ರಮ ಅಕ್ರಮ ಮತ್ತು ಏಕಪಕ್ಷೀಯವಾಗಿದೆ. ತನ್ನದಲ್ಲದ ಪ್ರದೇಶದ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಿರುವ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡುವುದಾಗಿ ಪಾಕ್ ತಿಳಿಸಿದೆ.

ಅಧಿಕೃತ ಮಾಹಿತಿ ಪ್ರಕಾರ, ಮಲೇಷ್ಯಾದ ಮಹಾತಿರ್ ಮೊಹಮದ್ ಮತ್ತು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಜೊತೆ ಪಾಕ್ ಪ್ರಧಾನಿ ಅವರು ಕಾಶ್ಮೀರದ ಪರಿಸ್ಥಿತಿ ಕುರಿತು ಮಾತನಾಡುತ್ತಿದ್ದಾಗ, ಕಾಶ್ಮೀರದ ಸ್ಥಾನಮಾನವನ್ನು ಬದಲಾಯಿಸುವುದು ಕಾನೂನುಬಾಹಿರ, ಅಕ್ರಮ ಮತ್ತು ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆ. ಭಾರತದ ಈ ನಡೆಯು ಪರಮಾಣು ಸಾಮರ್ಥ್ಯವುಳ್ಳ ನೆರೆ ರಾಷ್ಟ್ರಗಳ ಜೊತೆಗಿರುವ ಸಂಬಂಧವನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಹೇಳಿದ್ದರು ಎನ್ನಲಾಗಿದೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಮ್ಮು-ಕಾಶ್ಮೀರವನ್ನು ವಿವಾದಗ್ರಸ್ತ ಪ್ರದೇಶ ಎಂದು ಗುರುತಿಸಲಾಗಿದೆ. ಆದ್ದರಿಂದ ಈ ವಿಷಯದಲ್ಲಿ ಭಾರತ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುವುದು ಸರಿಯಲ್ಲ. ಕಣಿವೆ ರಾಜ್ಯ ಹಾಗೂ ಪಾಕಿಸ್ತಾನದ ಜನ ಇದನ್ನು ಒಪ್ಪುವುದಿಲ್ಲ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಪಾಕ್ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತದೆ ಎಂದು ಮೊದಲೇ ಅರಿತ್ತಿದ್ದ ಭಾರತವು ರಾಜ್ಯಸಭೆಯಲ್ಲಿ ಘೋಷಣೆಯಾಗುತ್ತಿದ್ದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್, ಜರ್ಮನಿಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಪರಿಚ್ಛೇಧ 370, 35ಎ ರದ್ದು ಮಾಡುವ ಬಗ್ಗೆ ಮಾಹಿತಿ ನೀಡಿತ್ತು.ಭಾರತ ಜಮ್ಮು-ಕಾಶ್ಮೀರದ ಮೇಲೆ ತೆಗೆದುಕೊಂಡಿರುವ ಕ್ರಮದಿಂದ ಪಾಕಿಸ್ತಾನ ಕೆಂಗೆಟ್ಟಿದ್ದು, ಪಾಕ್ ಅಧ್ಯಕ್ಷ ಆರೀಫ್ ಅಲ್ವಿ ಅವರು ಮಂಗಳವಾರ ದಿಢೀರ್ ಸಂಸತ್ತಿನ ಜಂಟಿ ಅಧಿವೇಶನ ಕರೆದಿದ್ದಾರೆ.