ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದ ಶನಿವಾರ 3.32 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಮೊದಲ ದಿನ ಗಳಿಸಿದ 1.28 ಕೋಟಿ ರೂ.ಗಳಿಗೆ ಹೋಲಿಸಿದಲ್ಲಿ ಸುಮಾರು ಎರಡೂವರೆ ಪಟ್ಟು ಹೆಚ್ಚಾದಂತಾಗಿದೆ. ದೇವಾಲಯದ ಬಾಗಿಲು ತೆಗೆದ ನಂತರ ಇದುವರಗೆ 70000 ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಟ್ರಾವಂಕೋರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್.ವಾಸು ಈ ವಿಷಯವನ್ನು ತಿಳಿಸಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಪ್ರತಿದಿನ 4೦,೦೦೦ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದ್ದು, ಸಾಕಷ್ಟು ನೀರು ಮತ್ತು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಶಬರಿಮಲೈಯನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಪ್ರಯತ್ನ ನಡೆದಿದ್ದು, ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ವಾಸು ಹೇಳಿದರು.ದೇವಸ್ಥಾನದ ಸಮೀಪದ ಪ್ರದೇಶಗಳಾದ ಪಾಂಬಾ ಮತ್ತು ನಿಲಕ್ಕಲ್‌ಗಳಲ್ಲಿ ಕೂಡ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ಕಳೆದ ಬಾರಿ, ಎಲ್ಲ ವಯೋಮಾನದ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅನುಷ್ಠಾನಗೊಳಿಸಲು ಕೇರಳ ಸರ್ಕಾರ ನಿರ್ಧರಿಸಿದ್ದರಿಂದ ದೇವಾಲಯದ ಆವರಣ ಭಾರಿ ಪ್ರತಿಭಟನೆಗಳು ನಡೆದಿದ್ದವು. ಆದರೆ ಈ ಬಾರಿ ಹಿಂದಿನ ಸಂಪ್ರದಾಯ ಮುಂದುವರಿಸಲು ನಿರ್ಧರಿಸಿರುವುದು ಭಕ್ತಾದಿಗಳಲ್ಲಿ ಸಂತಸ ತಂದಿದೆ.