ನಮ್ಮಲ್ಲಿ ದೇವರಿಗೆ, ಗೋವುಗಳಿಗೆ, ದಸರಾ ಸಂಧರ್ಭದಲ್ಲಿ ವಾಹನಗಳಿಗೂ ಸಹ ನಾವು ಪೂಜೆ ಸಲ್ಲಿಸುತ್ತೇವೆ. ಆದರೆ ವಿಚಿತ್ರ ಎಂದರೆ ಇಲ್ಲಿ ಒಂದು ಬುಲೆಟ್ ಗೆ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ ಎಂದರೆ ನೀವು ನಮ್ಬೋದಿಲ್ಲಾ..
ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರದಲ್ಲಿರುವ ಪಾಲಿ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ. ಈ ದೇವಾಲಯದಲ್ಲಿರುವ 350 ಸಿಸಿ ಯ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಬೈಕ್ ಗೆ ಪೂಜೆ ಸಲ್ಲಿಸಲೂ ಒಂದು ಕಾರಣವಿದೆ. ಅದೇನು ಅಂತೀರಾ? ಮುಂದೆ ಓದಿ.
1988 ರ ಡಿಸೆಂಬರ್ 2 ರಂದು ನಡೆದ ಬುಲೆಟ್ ಅಪಘಾತದಲ್ಲಿ ಓಂ ಸಿಂಗ್ ರಾಥೋರ್ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ತಮ್ಮ ಬೈಕ್ ನಲ್ಲಿ ಅವರು ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ್ದು, ಮರವೊಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿತ್ತು.
ಅಪಘಾತ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಪಘಾತಕ್ಕೀಡಾದ ಬೈಕ್ ಅನ್ನು ಪೊಲೀಸ್ ಠಾಣೆಯಲ್ಲಿ ತಂದಿರಿಸಿದ್ದರು. ಆದರೆ ಮಾರನೇ ದಿನ ಬೈಕ್ ಠಾಣೆಯಲ್ಲಿ ಕಾಣಿಸದಿದ್ದಾಗ ಹುಡುಕಿದ ವೇಳೆ ಅಪಘಾತಕ್ಕೀಡಾದ ಸ್ಥಳದಲ್ಲಿ ಅದು ಪತ್ತೆಯಾಗಿತ್ತು. ಸರಿ, ಯಾರೋ ಕಳ್ಳರ ಕೃತ್ಯವೆಂದು ಭಾವಿಸಿದ ಪೊಲೀಸರು ಪುನಃ ಬೈಕ್ ಅನ್ನು ಠಾಣೆಗೆ ತಂದು ಅದರಲ್ಲಿದ್ದ ಪೆಟ್ರೋಲ್ ಖಾಲಿ ಮಾಡಿ ನಿಲ್ಲಿಸಿದ್ದರು.
ಅಚ್ಚರಿಯೆಂಬಂತೆ ಠಾಣೆಯಿಂದ ಕಾಣೆಯಾಗಿದ್ದ ಬೈಕ್ ಮತ್ತೇ ಅಪಘಾತ ಸ್ಥಳದಲ್ಲಿ ಕಂಡು ಬಂದಿತ್ತು. ಪ್ರತಿ ಬಾರಿಯೂ ಇದು ಪುನರಾವರ್ತನೆಯಾಗಿದ್ದು, ಈ ಸುದ್ದಿ ಸುತ್ತಮುತ್ತಲ ಹಳ್ಳಿಯಲ್ಲಿ ಕಾಡ್ಗಿಚ್ಚಿನಂತೆ ಹರಡಿತು.
ಇದು ಓಂ ಸಿಂಗ್ ರಾಥೋರ್ ಪವಾಡವೆಂದೇ ಭಾವಿಸಿದ ಗ್ರಾಮಸ್ಥರು ದೇವಾಲಯ ನಿರ್ಮಾಣ ಮಾಡಿದ್ದಲ್ಲದೇ ಈ ಬೈಕ್ ಅನ್ನು ಅಲ್ಲಿ ನಿಲ್ಲಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಈ ದೇವಾಲಯವೀಗ ಬುಲೆಟ್ ಬಾಬಾ ಮಂದಿರವೆಂದೇ ಪ್ರಸಿದ್ದಿಯಾಗಿದೆ.