ಸಾಧನೆ

ಮಂಗಳೂರಿನಿಂದ, ಬೆಂಗಳೂರಿಗೆ ಕೇವಲ 4 ಗಂಟೆ 32 ನಿಮಿಷದಲ್ಲಿ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ.

By admin

February 07, 2020

ನಲ್ವತ್ತು ದಿನಗಳ ಹಸುಗೂಸನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ಆರು ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ ಅಂಬುಲೆನ್ಸ್ ನಲ್ಲಿ ಹೃದಯ ಪಂಪಿಂಗ್ ವ್ಯವಸ್ಥೆ ಮಾಡಿಕೊಂಡು ಕರೆದೊಯ್ಯಲಾಯ್ತು. ಮಂಗಳೂರಿನಿಂದ, ಬಿ.ಸಿ.ರೋಡ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಶಿರಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮೂಲಕ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಆಂಬುಲೆನ್ಸ್ ಬಂದಿದ್ದು ಹೆದ್ದಾರಿ ಉದ್ದಕ್ಕೂ ಜನರು ಟ್ರಾಫಿಕ್ ಸಂಚಾರ ಸುಗಮಗೊಳಿಸಿದ್ದಾರೆ. ಅಲ್ಲದೆ, ಆಯಾ ಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಎಸ್ಕಾರ್ಟ್ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಬುಲೆನ್ಸ್ ಚಾಲಕ ಹನೀಫ್, ಮಗುವಿಗೆ ಪುನರ್ ಜನ್ಮ ಸಿಗಬೇಕು ಎನ್ನುವ ಆಸೆ ನನಗೆ ಇತ್ತು. ಮಂಗಳೂರಿನಿಂದ ಬೆಂಗಳೂರನ್ನು 5 ಗಂಟೆಯಲ್ಲಿ ತಲುಪಬಹುದು ಎಂಬ ಆಲೋಚೆ ಹೊಂದಿದ್ದೆ. ಅದರಂತೆ 4 ಗಂಟೆ 32 ನಿಮಿಷದಲ್ಲಿ ಬೆಂಗಳೂರನ್ನು ತಲುಪಿದೆ. ಆದರೆ ಯಶವಂತಪುರದಿಂದ ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಗೆ ತಲುಪಲು 15 ನಿಮಿಷ ಹೆಚ್ಚು ಸಮಯ ತೆಗೆದುಕೊಂಡೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಾರ್ವಜನಿಕರು ಚಾಲಕ ಹನೀಫ್ ಅವರಿಗೆ ಮೈಸೂರು ಪೇಟಾ ಹಾಕಿ ಸನ್ಮಾನಿಸಿದರು. ಹನೀಫ್ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.