ಸುದ್ದಿ

ನೂತನ ಸ್ಪೀಕರ್ ಆಗಿ​ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ

By admin

July 30, 2019

ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿನ್ನೆ ಸದನದಲ್ಲಿ ಬಹುಮತ ಕೂಡ ಸಾಬೀತು ಮಾಡಿದ್ದಾರೆ. ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್​ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಸ್ಪೀಕರ್​ ಆಗಿ ಆಯ್ಕೆಯಾಗಿದ್ದು, ನಾಳೆ ಸದನದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ.

ಕಾಂಗ್ರೆಸ್​  ಮತ್ತು ಜೆಡಿಎಸ್​ ನಾಯಕರು ಸ್ಪೀಕರ್​ ಚುನಾವಣೆಯಿಂದ ಹಿಂದೆ ಸರಿದಿದ್ದು, ಯಾವುದೇ ನಾಮಪತ್ರ ಸಲ್ಲಿಸಿರಲಿಲ್ಲ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಹೀಗಾಗಿ ಕಾಗೇರಿ ಅವರು ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸ್ಫೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಸ ವ್ಯಕ್ತಪಡಿಸಿದ್ದಾರೆ. “ನಮ್ಮ ವರಿಷ್ಠರು, ನಮ್ಮ ನಾಯಕರು ಎಲ್ಲರೂ ಸೇರಿ ನನ್ನನ್ನು ಸ್ಪೀಕರ್​ ಆಗಿ ಆಯ್ಕೆ ಮಾಡಿದ್ದಾರೆ. ನಾನು ನಿಷ್ಠಾವಂತನಾಗಿ‌‌ ಸ್ಪೀಕರ್ ಹುದ್ದೆಯಲ್ಲಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ,” ಎಂದು ಕಾಗೇರಿ ಹೇಳಿದ್ಧಾರೆ.

ಈ ಬಗ್ಗೆ ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ ಮಾತನಾಡಿದ್ದಾರೆ. “ಕಾಗೇರಿ ಪಕ್ಷದ ನಿಷ್ಠಾವಂತ ಸ್ವಯಂ ಸೇವಕ. ಇಂತಹ ಸ್ವಯಂ ಸೇವಕ ಈಗ ಸ್ಪೀಕರ್ ಅಂತಹ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಕಾಗೇರಿ ಅವರಿಗೆ ಧನ್ಯವಾದಗಳು,” ಎಂದಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸುರೇಶ್ ಕುಮಾರ್ ಹೆಸರು ಸ್ಪೀಕರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬಂದಿದ್ದವು. ನಾನು ಈ ಬಾರಿ ಸ್ಪೀಕರ್ ಆಗಿ ಕೆಲಸ ನಿರ್ವಹಿಸಲಾರೆ ಎಂದು ಈಗಾಗೇ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಸ್ಪಷ್ಟಪಡಿಸಿದ್ದರು