ತುಮಕೂರು, ಜು. 27- ಬಾಣಂತನಕ್ಕೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆಸದ ತಾಯಿ ಜತೆ ಜಗಳವಾಡಿ ಪದೇ ಪದೇ ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ಅಣ್ಣನ ವರ್ತನೆಯಿಂದ ಕುಪಿತಗೊಂಡ ತಮ್ಮ ರಾತ್ರಿ ಅಣ್ಣನ ಕುತ್ತಿಗೆಗೆ ಚಾಕುವಿನಿಂದ ಬಲವಾಗಿ ಇರಿದು ಕೊಲೆ ಮಾಡಿರುವ ಧಾರುಣ ಘಟನೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮಗೊಂಡನಹಳ್ಳಿಯ ಮಹೇಶ್ (35) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ತಮ್ಮ ಅಂಜನಮೂರ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಹನುಮಯ್ಯ-ಗಂಗಮ್ಮ ದಂಪತಿಯ ಮೊದಲ ಮಗನಾದ ಮಹೇಶ್ ನಿಗೆ ಮದುವೆಯಾಗಿದ್ದು ಬಾಣಂತನಕ್ಕೆಂದು ಪತ್ನಿ ತನ್ನ ತವರು ಮನೆಯಾದ ಆಂಧ್ರಪ್ರದೇಶಕ್ಕೆ 8 ತಿಂಗಳ ಹಿಂದೆ ಹೋಗಿದ್ದು ವಾಪಸಾಗಿಲ್ಲ.
ಲಾರಿ ಚಾಲಕ ವೃತ್ತಿ ಮಾಡುತ್ತಿದ್ದ ಮಹೇಶ ತನ್ನ ಪತ್ನಿಯನ್ನು ಕರೆಸುವಂತೆ ತಾಯಿ ಜತೆ ಆಗಾಗ್ಗೆ ಕುಡಿದು ಬಂದು ಜಗಳವಾಡುತ್ತಿದನು. ಸಹೋದರ್ಮ ಅಂಜನಮೂರ್ತಿ ಬುದ್ದಿವಾದ ಹೇಳಿದರೂ ತನ್ನ ಚಾಳಿ ಮುಂದುವರೆಸಿದನು. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಕುಡಿದುಕೊಂಡು ಮನೆಗೆ ಬಂದ ಮಹೇಶ ಪತ್ನಿಯನ್ನು ಕರೆಸಿಲ್ಲ ಎಂದು ಮತ್ತೊಮ್ಮೆ ಜಗಳವಾಡಿ ತಾಯಿಗೆ ಮನಬಂದಂತೆ ಹೊಡೆದಿದ್ದಾನೆ.
ನೆರೆಮನೆಯವರು ಜಗಳ ಬಿಡಿಸಿ ಸಮಾಧಾನ ಪಡಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮನೆಯಿಂದ ಹೊರಗೆ ಹೋದ ಮಹೇಶ ರಾತ್ರಿ 8 ಗಂಟೆ ಸುಮಾರಿನಲ್ಲಿ ಮತ್ತೆ ಕುಡಿದು ಬಂದು ತಾಯಿಯನ್ನು ಹುಡುಕಾಡಿದ್ದಾನೆ. ಈತನ ವರ್ತನೆಯಿಂದ ಭಯಗೊಂಡ ತಾಯಿ ಮನೆಯ ಹಿಂಬದಿ ಬಚ್ಚಿಟ್ಟುಕೊಂಡಿದ್ದಾರೆ. ಕೆಲ ಸಮಯದ ನಂತರ ಮಹೇಶ ನಿದ್ರೆಗೆ ಜಾರಿದ್ದಾನೆ.ರಾತ್ರಿ 9ಗಂಟೆ ಸುಮಾರಿನಲ್ಲಿ ಎರಡನೇ ಮಗ ಅಂಜನಮೂರ್ತಿ ಮನೆಗೆ ಬಂದಾಗ ಮನೆಯಲ್ಲಿ ತಾಯಿ ಇಲ್ಲದಿರುವುದನ್ನು ಗಮನಿಸಿ ಎಲ್ಲ ಕಡೆ ಹುಡುಕಾಡಿದ್ದಾನೆ. ಮಗನ ಧ್ವನಿ ಕೇಳಿದ ಗಂಗಮ್ಮ ಬಚ್ಚಿಟ್ಟುಕೊಂಡಿದ್ದ ಸ್ಥಳದಿಂದ ಬಂದು ಮಧ್ಯಾಹ್ನ ನಡೆದ ಘಟನೆಯ ವಿವರವನ್ನು ತಿಳಿಸಿದ್ದಾರೆ.
ಅಣ್ಣನ ವರ್ತನೆ ಪ್ರತಿದಿನ ಮಿತಿಮೀರುತ್ತಿದೆ, ಎಷ್ಟು ಬುದ್ಧಿ ಹೇಳಿದರೂ ಕೇಳುವುದಿಲ್ಲ ಎಂದು ಆಕ್ರೋಶಗೊಂಡ ಅಂಜನಮೂರ್ತಿ ಅಡುಗೆಮನೆಯಲ್ಲಿದ್ದ ಚಾಕುವನ್ನು ತಂದು ಮಲಗಿದ್ದ ಅಣ್ಣನ ಮೇಲೆ ಕುಳಿತು ಕುತ್ತಿಗೆ ಕುಯ್ದು ಕೊಲೆ ಮಾಡಿ ನಂತರ ಮನೆ ಹೊರಗೆ ಕುಳಿತಿದ್ದ ತಾಯಿಗೆ ಅಣ್ಣನನ್ನು ಕೊಲೆ ಮಾಡಿರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.ಈ ಘಟನೆಯಿಂದ ಕಂಗಾಲಾದ ತಾಯಿ ಚೀರುತ್ತಾ ಮನೆಯೊಳಗೆ ಹೋಗಿದ್ದನ್ನು ಗಮನಿಸಿದ ನೆರೆಹೊರೆಯವರು ಮನೆ ಬಳಿ ಬಂದು ನೋಡಿದಾಗ ಮಹೇಶ ಕೊಲೆಯಾಗಿರುವುದುನ್ನು ಕಂಡು ತಕ್ಷಣ ಕೋರಾ ಠಾಣೆ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಸಬ್ ಇನ್ಸ್‍ಪೆಕ್ಟರ್ ಶೇಷಾದ್ರಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ವೃತ್ತನಿರೀಕ್ಷಕ ಮಧುಸೂಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ಕೋನವಂಶಿಕೃಷ್ಣ ಅವರು, ಆರೋಪಿ ಪತ್ತೆಗೆ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಮಧುಸೂಧನ್, ಸಬ್ ಇನ್ಸ್‍ಪೆಕ್ಟರ್ ಶೇಷಾದ್ರಿ, ಸಿಬ್ಬಂದಿ ಶ್ರೀನಿವಾಸ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು.ಈ ತಂಡ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಈತ ಆಂಧ್ರಪ್ರದೇಶಕ್ಕೆ ಪರಾರಿಯಾಗುತ್ತಿದ್ದಾನೆಂಬ ಸುಳಿವಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ ಆರೋಪಿ ಅಂಜನಮೂರ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.