‘ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅಷ್ಟೇ ಅಲ್ಲ, ಅವರ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಂದರೂ ಭಯವಿಲ್ಲ. ಅವರನ್ನು ಸೋಲಿಸಿ ಮನೆಗೆ ಕಳುಹಿಸಲು ಕ್ಷೇತ್ರದ ಜನ ಶಪಥ ಮಾಡಿದ್ದಾರೆ! ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ವಕ್ಕಲೇರಿ ಗ್ರಾಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.
‘ವರ್ತೂರು ಪ್ರಕಾಶ್ ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಹಳ್ಳಿಹಳ್ಳಿಗೂ ಹೋಗಿ ಜನರ ಕಷ್ಟ ಆಲಿಸುತ್ತಿದ್ದಾರೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ. ಕೆಲಸ ಮಾಡುವವರಿಗೆ ಟಿಕೆಟ್ ನೀಡುವುದು ಖಚಿತ’ ಎಂದರು.
‘ಸಿದ್ದರಾಮಯ್ಯ ಹಾಗೂ ಅವರ ಕಾಂಗ್ರೆಸ್ ಪಕ್ಷವು ಕುರುಬ, ಒಕ್ಕಲಿಗ, ದಲಿತ ಹಾಗೂ ಅಲ್ಪಸಂಖ್ಯಾತರ ವಿರೋಧಿ. ಇವರೆಲ್ಲರೂ ಸಿದ್ದರಾಮಯ್ಯ ಕೋಲಾರಕ್ಕೆ ಬರಲಿ ಎಂದು ಕಾಯುತ್ತಿದ್ದಾರೆ’ ಎಂದು ಹೇಳಿದರು.
‘ಕಾಂಗ್ರೆಸ್ ಪಕ್ಷವು ದಲಿತರ ವಿರೋಧಿ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು? ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಅಂತ್ಯಸಂಸ್ಕಾರಕ್ಕೆ ನೂರಾರು ಎಕರೆ ಜಾಗ ಕೊಟ್ಟ ಕಾಂಗ್ರೆಸ್ಸಿಗರು ಅಂಬೇಡ್ಕರ್ ವಿಧಿವಶರಾದಾಗ ದೆಹಲಿ ಯಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ’ ಎಂದು ಟೀಕಿಸಿದರು.
‘ಕೇಂದ್ರ ಸರ್ಕಾರ ₹ 100 ಅನುದಾನ ಬಿಡುಗಡೆ ಮಾಡಿದರೆ ಜನತೆಗೆ ₹20 ಮಾತ್ರ ತಲುಪುತ್ತಿದೆ ಎಂಬುದಾಗಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ಹೇಳಿದ್ದರು. ಮೂರು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿರುವುದಾಗಿ ಈಚೆಗೆ ಶ್ರೀನಿವಾಸಪುರ ಶಾಸಕರ ಘೋಷಿಸಿದ್ದರು. ಜನರ ದುಡ್ಡು ತಿಂದು ತೇಗಿದ್ದೇ ಇವರ ಸಾಧನೆ’ ಎಂದುಆರೋಪಿಸಿದರು.
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ‘ವಕ್ಕಲೇರಿ ಹೋಬಳಿಯ ಜನತೆ ಬುದ್ಧಿವಂತರು. ಈ ಕ್ಷೇತ್ರದಲ್ಲಿ ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ನನಗೆ ಮುನ್ನಡೆ ನೀಡಿದ್ದಾರೆ. ಕೋಲಾರ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಈ ಕ್ಷೇತ್ರದಲ್ಲಿ ಗೆದ್ದ ಶಾಸಕರು ಜನರು ಹಾಗೂ ಗ್ರಾಮಗಳನ್ನು ಮರೆತಿದ್ದಾರೆ’ ಎಂದರು.