ಜಾಗತಿಕ ತಾಪಮಾನ ಏರಿಕೆ ಈ ಮೊದಲು ಊಹಿಸಿದ್ದಕ್ಕಿಂತಲೂ ಮೂರು ಪಟ್ಟು ಭೀಕರವಾಗಿರಲಿದೆ. ಇತ್ತೀಚಿನ ಸಂಶೋಧನಾ ವರದಿಗಳ ಪ್ರಕಾರ 2050ರ ವೇಳೆಗೆ ವಿಶ್ವದ ಪ್ರಮುಖ ಕರಾವಳಿ ನಗರಗಳು ಭೂಪಟದಿಂದಲೇ ಅಳಿಸಿ ಹೋಗಲಿವೆಯಂತೆ. ದೇಶದ ವಾಣಿಜ್ಯ ನಗರಿ ಮುಂಬಯಿ ಸೇರಿದಂತೆ ಸಮುದ್ರ ಮಟ್ಟದಲ್ಲಿರುವ ವಿಶ್ವದ ಹಲವಾರು ನಗರಗಳು ಜಲಸಮಾಧಿಯಾಗಲಿವೆ.
ಅಮೆರಿಕದ ನ್ಯೂ ಜೆರ್ಸಿ ನಗರದ “ಕ್ಲೈಮೇಟ್ ಸೆಂಟ್ರಲ್” ಎಂಬ ವಿಜ್ಞಾನ ಸಂಸ್ಥೆಯು ಈ ಹೊಸ ಸಂಶೋಧನೆ ನಡೆಸಿ ತನ್ನ ವರದಿಯನ್ನು “ನೇಚರ್ ಕಮ್ಯೂನಿಕೇಶನ್ಸ್”ಪತ್ರಿಕೆಯಲ್ಲಿ ಬಿಡುಗಡೆ ಮಾಡಿದೆ. ಸಂಶೋಧಕರು ಈ ಹಿಂದಿನ ವಿಧಾನದ ಬದಲು ಉಪಗ್ರಹ ಮಾಹಿತಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ನೆರವಿನಿಂದ ಸಮುದ್ರ ನೀರಿನ ಮಟ್ಟವನ್ನು ಅಳೆದು ಭೂಮುಳುಗಡೆಯ ಪ್ರಮಾಣವನ್ನು ಹೆಚ್ಚು ಕರಾರುವಾಕ್ಕಾಗಿ ಅಂದಾಜು ಮಾಡಿದ್ದಾರೆನ್ನಲಾಗಿದೆ.
ಭಾರತದ ವಾಣಿಜ್ಯ ರಾಜಧಾನಿ ಎನ್ನಲಾದ ಹಾಗೂ ವಿಶ್ವದ ಬೃಹತ್ ನಗರಗಳಲ್ಲೊಂದೆನಿಸಿದ ಮುಂಬೈನ ಬಹುತೇಕ ಭೂಪ್ರದೇಶವು ನೀರಿನಲ್ಲಿ ಮುಳುಗಡೆಯಾಗಲಿದೆ ಎಂದು ಈ ಸಂಶೋಧಕರು ಎಚ್ಚರಿಸಿದ್ದಾರೆ. ಮುಂಬೈ ಅಷ್ಟೇ ಅಲ್ಲ, ವಿಯೆಟ್ನಾಮ್ನ ಹೋ ಚಿ ಮಿನ್ ನಗರ, ಥಾಯ್ಲೆಂಡ್ನ ಬ್ಯಾಂಕಾಕ್, ಚೀನಾದ ಶಾಂಘೈ, ಈಜಿಪ್ಟ್ನ ಅಲೆಕ್ಸಾಂಡ್ರಿಯಾ,ಇರಾಕ್ನ ಬಾಸ್ರಾ ಮೊದಲಾದ ನಗರಗಳು ಮುಳುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.
ಸಮುದ್ರದ ದಡದಲ್ಲಿ ಮರಗಳು ಮತ್ತು ಕಟ್ಟಡಗಳು ಇರುವ ಕಾರಣ ಭೂಮಿಯ ನಿಜವಾದ ಎತ್ತರವನ್ನು ಕಂಡುಕೊಳ್ಳುವುದು ಕಷ್ಟವಾಯಿತು ಎಂದು ಸಂಶೋಧನಾ ತಂಡದ ಸದಸ್ಯನಾದ ಸ್ಕಾಟ್ ಎ. ಕುಲ್ಪ್ ತಿಳಿಸಿದ್ದಾರೆ. ಸಂಶೋಧನೆ ಪ್ರಕಾರ 2050ರ ವೇಳೆಗೆ ಸಮುದ್ರ ದಡದಲ್ಲಿ ವಾಸವಾಗಿರುವ 15 ಕೋಟಿ ಜನರು ತಮ್ಮ ಮನೆ ಕಳೆದುಕೊಳ್ಳಲಿದ್ದಾರೆ. ಕಾರಣ ಈ ಪ್ರದೇಶ ಸಮುದ್ರದ ಅಲೆಗಳಿಗೆ ಸಿಲುಕಿ ಮುಳುಗಿ ಹೋಗಲಿದೆ.
ಈ ಪ್ರದೇಶಗಳಲ್ಲಿ ವಾಸವಿರುವ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಕೋಟ್ಯಂತರ ಜನರು ಬೇರೊಂದು ಪ್ರದೇಶಗಳಿಗೆ ಗುಳೆ ಹೋದಾಗ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಸಾಮಾಜಿಕ ಮತ್ತು ರಾಜಕೀಯ ಅಭದ್ರತೆ ಕಾಡಬಹುದು. ನೆಲಕ್ಕಾಗಿ, ವಸಾಹತಿಗಾಗಿ ಸಶಸ್ತ್ರ ಸಂಘರ್ಷ, ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗಬಹುದು. ಇದು ಹವಾಮಾನ ಸಂಬಂಧಿತ ಅಪಾಯಕ್ಕಿಂತಲೂ ಹೆಚ್ಚು ತೀವ್ರ ಮಟ್ಟದ್ದು ಎಂದು ಮತ್ತೊಂದು ಸಂಶೋಧಕರ ತಂಡವು ಆತಂಕ ವ್ಯಕ್ತಪಡಿಸಿದೆ.