ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿನ ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಆಸರೆಯಾಗಿರುವ ದೃಶ್ಯ ಒಂದು ಕಂಡುಬಂದಿದೆ. ತಂತ್ರಜ್ಞಾನದ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ಆಟೋ, ಬಸ್ ಇಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ವಾತ್ಸಲ್ಯಮಯಿ ತಾಯಿ ಜಯಲಕ್ಷ್ಮಿ ತಮ್ಮ ವಿಶೇಷ ಚೇತನನಾಗಿರುವ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ನಾಲ್ಕು ಕಿ.ಮೀ ಹೊತ್ತುಕೊಂಡು ಓದಿಸುತ್ತಿದ್ದಾರೆ. ಐಎಎಸ್ ಓದಬೇಕೆಂಬ ಕನಸು ಹೊತ್ತಿರುವ ರಾಜೇಶನ ಕನಸು ಈಡೇರಿಸಲು ಜಯಲಕ್ಷ್ಮಿ ತನ್ನ ಜೀವನ ಧಾರೆ ಎರೆಯುತ್ತಿದ್ದಾರೆ. ಜಯಲಕ್ಷ್ಮಿ ಅವರಿಗೆ ಮೂವರು ಮಕ್ಕಳಿದ್ದು, ಮೊದಲನೇ ಮಗ ರಾಜೇಶ್‍ಗೆ ಅಂಗವಿಕಲತೆ ಕಾಡುತ್ತಿದೆ.
ಪತಿ ಇಲ್ಲವಾದರೂ ಎದೆಗುಂದದ ಜಯಲಕ್ಷ್ಮಿ, ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ. ಏಳನೇ ತರಗತಿಯವರೆಗೆ ತಮ್ಮ ಸ್ವ-ಗ್ರಾಮವಾಗಿರುವ ಕಡುದರಹಳ್ಳಿಯಲ್ಲಿ ಓದಿದ್ದ ಬಾಬುಗೆ ಓಡಾಡಲು ಶಕ್ತಿಯಿಲ್ಲವಾದರೂ ವಿದ್ಯಾಭ್ಯಾಸದ ಚಿತ್ತ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ತನ್ನ ತಾಯಿಯ ಹೆಗಲ ಆಸರೆ ಪಡೆದು ಕಡುದರಹಳ್ಳಿಯಿಂದ ಮಿರಾಸಾಬಿಹಳ್ಳಿಯ ರಾಣಿಕೆರೆ ಹೈಸ್ಕೂಲಿಗೆ ಬಂದು ಎಂಟನೇ ತರಗತಿ ಓದುತ್ತಿದ್ದಾನೆ. ಸರ್ಕಾರದಿಂದ ರಾಜೇಶ್ ಬಾಬುಗೆ ನೀಡಿದ್ದ ತ್ರಿಚಕ್ರ ಸೈಕಲ್ ಹಾಳಾಗಿ ಮೂಲೆ ಸೇರಿದೆ. ನಿತ್ಯವೂ ತನ್ನ ತಾಯಿಯ ಹೆಗಲ ಮೇಲೆ ಶಾಲೆಗೆ ಬರುವ ರಾಜೇಶ್‍ಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂಬ ಎಂದು ಶಿಕ್ಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.