ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು‘ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್. ಧಾರಾವಾಹಿಯಲ್ಲಿ ಮನೆ ಕೆಲಸದವಳ ಪಾತ್ರದಲ್ಲಿ ಕಾಣಿಸಿಕೊಂಡ ಮೋಕ್ಷಿತಾಗೆ ಇತ್ತೀಚೆಗೆ ನಡೆದ ‘ಜೀ ಕುಟುಂಬ ಅವಾರ್ಡ್ಸ್’ನಲ್ಲಿ ಬೆಸ್ಟ್ ಲೀಡ್ ಫಿಮೇಲ್ ಪ್ರಶಸ್ತಿ ಸಿಕ್ಕಿತ್ತು. ಅಷ್ಟೇ ಅಲ್ಲದೆ ಧಾರಾವಾಹಿ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಗೆ ಭಾರೀ ಜನಮನ್ನಣೆ ಕೂಡ ಲಭಿಸಿತ್ತು.
ಪಾರು ಪಾತ್ರಧಾರಿ ಮೋಕ್ಷಿತಾ ಪೈ ಅಕ್ಟೋಬರ್ 22ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸರ್ಜಾಪುರದಲ್ಲಿರುವ ‘ತಾಯಿಮನೆ’ ಅನಾಥಾಶ್ರಮದಲ್ಲಿ 100ಕ್ಕೂ ಅಧಿಕ ಮಕ್ಕಳಿಗೆ ಬೆಳಿಗ್ಗಿನ ತಿಂಡಿಯನ್ನು ತಮ್ಮ ಕೈಯ್ಯಾರೆ ಬಡಿಸಿ ಖುಷಿಯಿಂದ ಬರ್ತಡೇ ಆಚರಿಸಿಕೊಂಡಿದ್ದಾರೆ.
ಮೂರು ದಿನದ ಮುಂಚೆಯೇ ಅನಾಥಾಶ್ರಮದ ಮುಖ್ಯಸ್ಥರ ಬಳಿ ಮಕ್ಕಳಿಗೆ ಯಾವ ತಿಂಡಿ ಇಷ್ಟವಾಗುತ್ತೆ ಅಂತ ಕೇಳಿದ್ದರಂತೆ. ಚಾಕ್‌ಲೇಟ್, ಕೇಕ್ ಅನಾಥಾಶ್ರಮದ ಮಕ್ಕಳಿಗೆ ನೀಡುವಂತಿಲ್ಲ. ಹೀಗಾಗಿ ಮಕ್ಕಳಿಗೆ ಇಷ್ಟವಾಗುವ ಇಡ್ಲಿ, ವಡಾವನ್ನು ತಮ್ಮ ಕೈಯ್ಯಾರೆ ಮಕ್ಕಳಿಗೆ ನೀಡಿದ್ದಾರೆ ಮೋಕ್ಷಿತಾ. ಅನಾಥಾಶ್ರಮದಲ್ಲಿ ಅವರು ಈ ವರ್ಷ ಮೂರನೇ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
“ಅನಾಥಾಶ್ರಮದಲ್ಲಿ ಆಗಾಗ ಮಕ್ಕಳು ‘ಪಾರು’ ಧಾರಾವಾಹಿ ವೀಕ್ಷಿಸುತ್ತಾರಂತೆ. ಪ್ರತಿದಿನ ಧಾರಾವಾಹಿ ನೋಡಲು ಮಕ್ಕಳಿಗೆ ಅವಕಾಶ ಇಲ್ಲ. ಹೀಗಾದರೂ ಕೂಡ ಆ ಮಕ್ಕಳು ನನ್ನನ್ನು ಪಾರು ಎಂದು ಗುರುತಿಸಿ ಖುಷಿಪಟ್ಟರು. ಆ ಮಕ್ಕಳಿಗೆ ಅಪ್ಪ-ಅಮ್ಮ ಯಾರೂ ಇಲ್ಲ. ಅವರೆಲ್ಲ ಮುಗ್ಧರು. ಅವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರೆ ನನ್ನ ಜನ್ಮದಿನಲ್ಲೊಂದು ಸಾರ್ಥಕತೆ ಸಿಗುತ್ತದೆ. ಅವರ ಹಾರೈಕೆಯೇ ನನ್ನಲ್ಲಿ ದೊಡ್ಡ ಪಾಸಿಟಿವ್‌ನೆಸ್ ತುಂಬುತ್ತದೆ.” ಎನ್ನುತ್ತಾರೆ ಮೋಕ್ಷಿತಾ.