ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ಮೆಟ್ರೋದಲ್ಲಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಇದರಿಂದ ಸರದಿಯಲ್ಲಿ ನಿಲ್ಲುವ ಬಾದೆ ತಪ್ಪಲಿದ್ದು ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಬಹುದು.
ಪ್ರಯಾಣಿಕರು ಬಿಎಂಆರ್ ಸಿಎಲ್ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಂಡು ಅಗತ್ಯ ಮೊತ್ತದ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಮೊಬೈಲ್ ಆಪ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಲ್ಲಿ ಪ್ಲಾಟ್ ಫಾರಂ ಪ್ರವೇಶಿಸುವ ದ್ವಾರ ಓಪನ್ ಆಗಲಿದೆ. ಇಳಿಯುವ ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪ್ರಯಾಣಿಕರಿಗೆ ಹಣ ಕಡಿತವಾಗಲಿದೆ.
ಇನ್ನು ಇಷ್ಟು ದಿನ ಮೆಟ್ರೋದಲ್ಲಿ ಪ್ರಯಾಣಿಸಬೇಕಿದ್ದರೆ ಟೋಕನ್ ತೆಗೆದುಕೊಳ್ಳಬೇಕಿತ್ತು ಇಲ್ಲವೇ ತಮ್ಮ ಸ್ಮಾರ್ಟ್ ಕಾರ್ಡ್ ಬಳಸಿ ತೆರಳಬೇಕಿತ್ತು. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಹಾಯದಿಂದ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿತ್ತು.
ಪ್ರಯಾಣಿಕರಿಗೆ ಸಮಯ ಉಳಿತಾಯ ಮತ್ತು ಆನ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಂಡಿದ್ದು ಎರಡನೇ ಹಂತದ 61 ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು.