ಎಲ್ಲರಿಗೂ ತಿಳಿದಿರುವ ಹಾಗೆ ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ.
ಯಾವುದೋ ಕೆಮಿಕಲ್ ಇರುವ ಕ್ರೀಮ್ ಹಚ್ಚುವ ಬದಲು, ನಿಮ್ಮ ಮನೆಯಲ್ಲೇ ಇರುವ ಮೆಂತೆ ಕಾಳುಗಳಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
50 ಗ್ರಾಂ ಮೆಂತೆ ಕಾಳನ್ನು ರಾತ್ರಿ ನೆನಸಿಡಿ. ಬೆಳಗ್ಗೆ ಎದ್ದು ಅದರಲ್ಲಿನ ನೀರನ್ನ ತೆಗೆಯಿರಿ. ಆದ್ರೆ ಆ ನೀರನ್ನು ಚೆಲ್ಲಬಾರದು. ಈ ಮೆಂತೆ ಕಾಳುಗಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಮೊಸರು ಸೇರಿಸಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಲ್ಲಿ ಮುಖ ತೊಳೆದರೆ ನಿಮ್ಮ ಮುಖ ಕಾಂತಿಯುತವಾಗಿ ಕಾಣುತ್ತೆ.
ಇನ್ನು ತೆಗೆದಿಟ್ಟಿದ್ದ ಮೆಂತೆ ನೀರನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿಯಬಹುದು. ಇದ್ರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತೆ. ಮೆಂತೆಯಲ್ಲಿ ಪ್ರೋಟಿನ್ ಹೆಚ್ಚಾಗಿ ಇರುವುದರಿಂದ ಆ ನೀರನ್ನ ತಲೆಗೆ ಹಚ್ಚಿಕೊಂಡು ಮಸಾಜ್ ಮಾಡಬಹುದು. ಇದ್ರಿಂದ ಕೂದಲಿನ ಬುಡ ಗಟ್ಟಿಯಾಗಿ, ಕೂದಲು ಉದುರುವುದು ಕಡಿಮೆಯಾಗಲಿದೆ. ಹಾಗೆಯೇ ಆಹಾರ ವ್ಯತ್ಯಾಸವಾಗಿ, ಹೊಟ್ಟೆ ನೋವು, ಬೇಧಿ ಆಗ್ತಿದ್ರೆ, ಮೊಸರಿನ ಜೊತೆ ಒಂದು ಸ್ಪೂನ್ ಮೆಂತೆ ಕಾಳನ್ನು ಅರ್ಧಗಂಟೆ ನೆನಸಿಟ್ಟು ತಿಂದ್ರೆ ಸ್ವಲ್ಪ ಸಮಯದಲ್ಲೇ ಸಮಸ್ಯೆ ಶಮನವಾಗುತ್ತೆ. ಒಟ್ನಲ್ಲಿ ಈ ಮೆಂತೆ ಕಾಳುಗಳು ಬಹುಪಯೋಗಿ ಆಗಿವೆ.