ಸುದ್ದಿ

ಲಿಂಗೈಕ್ಯರಾದ ಜಗದ್ಗುರು ಮಾತೆ ಮಹಾದೇವಿ…

By admin

March 14, 2019

ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಸವ ಪೀಠದ ಅಧ್ಯಕ್ಷೆ 74 ವರ್ಷದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ.

ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು ಬಳಲುತ್ತಿದ್ದರು. ಹೀಗಾಗಿ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 10ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾತೆ ಮಹಾದೇವಿ ಗುರು ಲಿಂಗಾನಂದ ಅವರಿಂದ ಪ್ರಭಾವಿತರಾಗಿ ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಇವರನ್ನು ಪ್ರಥಮ ಮಹಿಳಾ ಜಗದ್ಗುರು ಎಂದು ಭಕ್ತರು ಗುರುತಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದ ಮಹಾದೇವಿ ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ ಮಾಡಿ ಜನಾನುರಾಗಿ ಕೆಲಸ ಆರಂಭಿಸಿದ್ದರು. 5 ನೇ ಏಪ್ರಿಲ್ 1966 ಜಂಗಮ ದೀಕ್ಷೆ ಪಡೆದ ಮಾತೆ ಮಹಾದೇವಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.