ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಏನಿದು ಪ್ರಕರಣ? ಮೃತ ಕುಮಾರ್ ಮದುವೆ ಭಾನುವಾರ ನಿಗದಿಯಾಗಿತ್ತು. ವರ ಕುಮಾರ್ ಅಖಿಲ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಷಮ್ ಚಕ್ ಗ್ರಾಮದನಾಗಿದ್ದು, ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ವಧುವಿನ ಮನೆಗೆ ಬಂದಿದ್ದನು. ನಂತರ ನವಜೋಡಿ ಹೂ ಮಾಲೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ವರನ ಸ್ನೇಹಿತರು ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡುತ್ತಿದ್ದರು. ಆಗ ವರನ ಸ್ನೇಹಿತರೊಬ್ಬ ವೇದಿಕೆ ಮೇಲೆ ಬಂದೂಕನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಲಾರಂಭಿಸಿದನು.
ಈ ವೇಳೆ ಬಂದೂಕಿನಲ್ಲಿ ಸಿಲುಕಿದ್ದ ಮೂರು ಗುಂಡುಗಳನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾಗ ಮೂರು ಗುಂಡುಗಳು ಆಕಸ್ಮಿಕವಾಗಿ ಹಾರಿವೆ. ಅದರಲ್ಲಿ ಒಂದು ವರನಿಗೆ ಮತ್ತು ಆತನ ಸಹೋದರ ಗುಡ್ಡುವಿಗೆ ತಗುಲಿವೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು,. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ವರ ಕುಮಾರ್ ಮೃತಪಟ್ಟಿದ್ದಾನೆ. ಸದ್ಯಕ್ಕೆ ವರನ ಸಹೋದರ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಸದ್ಯ ಅಪರಾಧಿ ಯಾರು ಎಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸಂಭ್ರಮಾಚರಣೆ ನಡೆಸಿ ಗುಂಡು ಹಾರಿಸಿದ್ದ ವರನ ಸ್ನೇಹಿತ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿದೆ ಎಂದು ದಾನ್‍ಪುರದ ಸಹಾಯಕ ಪೊಲೀಸ್ ಕಮೀಷನರ್ ಅಶೋಕ್ ಮಿಶ್ರಾ ತಿಳಿಸಿದ್ದಾರೆ.ಸದ್ಯ ಎಫ್‍ಐಆರ್ ದಾಖಲಿಸಿರುವ ಪೊಲೀಸರು, ಘಟನೆ ಕುರಿತಂತೆ ವಿಡಿಯೋ ದೃಶ್ಯಾವಳಿಯನ್ನು ಕಲೆಹಾಕಲು ಮುಂದಾಗಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಬಿಹಾರ ಪೊಲೀಸರು ಸಂಭ್ರಮಾಚರಣೆ ಫೈರಿಂಗ್‍ನ್ನು ನಿಷೇಧಿಸಿದ್ದರೂ ಕೂಡ ಇಂತಹ ಅವಘಡಗಳು ನಡೆಯುತ್ತಲೇ ಇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.