ರಾಯ್ಪುರ್: ಸಿಆರ್‌ಪಿಎಫ್ ಯೋಧನೊಬ್ಬ ಪ್ರೇಯಸಿ ಮತ್ತು ಪತ್ನಿಯನ್ನು ಮರು ವಿವಾಹವಾಗುವ ಮೂಲಕ ಇಬ್ಬರನ್ನೂ ಏಕಕಾಲಕ್ಕೆ ಮದುವೆಯಾಗಿರುವ ಅಪರೂಪದ ಘಟನೆ ಛತ್ತೀಸ್‍ಗಢದ ಜಾಷ್ಪುರ್ ಜಿಲ್ಲೆಯ ಬಗ್ದೋಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಜಾಷ್ಪುರ್ ಮೂಲದ ಅನಿಲ್ ಪೈಕ್ರಾ ಇಬ್ಬರು ಮಹಿಳೆಯರನ್ನು ಮದುವೆಯಾದ ಸಿಆರ್‌ಪಿಎಫ್ ಯೋಧ. ಇವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿಆರ್‌ಪಿಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಿಲ್ ಪೈಕ್ರಾ ನಾಲ್ಕು ವರ್ಷಗಳ ಹಿಂದೆ ತಮ್ಮ ಗ್ರಾಮದ ಪಕ್ಕದ ಗ್ರಾಮದ ಯುವತಿ ಜೊತೆ ಮದುವೆಯಾಗಿದ್ದರು. ಮದುವೆಯಾಗಿದ್ದರೂ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದರು.
ಸ್ಥಳೀಯರು ಪ್ರಕಾರ ಅನಿಲ್ ಪೈಕ್ರಾ ಅವರ ಮೊದಲ ಪತ್ನಿ ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ತಾವೂ ಪ್ರೀತಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಮದುವೆಯಾಗಲು ನಿರ್ಧರಿಸಿದರು. ಈ ಮದುವೆಗೆ ಮೊದಲ ಪತ್ನಿ ಕೂಡ ಒಪ್ಪಿಗೆ ಸೂಚಿಸಿದ್ದರು. ಆದ್ದರಿಂದ ಅನಿಲ್ ರಜೆ ಮೇಲೆ ಗ್ರಾಮಕ್ಕೆ ಬಂದಾಗ ತನ್ನ ಪ್ರೇಯಸಿಯ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು. ಇದೀಗ ಸಂಪ್ರದಾಯದಂತೆ ಪ್ರೇಯಸಿಯ ಜೊತೆ ಪತ್ನಿಯನ್ನು ಮರು ಮದುವೆಯಾಗಿದ್ದಾರೆ ಎಂದು ಪತ್ರಕರ್ತ ರಾಜೇಶ್ ಪಾಂಡೆ ಅವರು ತಿಳಿಸಿದ್ದಾರೆ.
ಕಾನೂನಿನ ಪ್ರಕಾರ ಸರ್ಕಾರಿ ಕೆಲಸದಲ್ಲಿರುವವರು ಮೊದಲ ಪತ್ನಿ ಬದುಕಿರುವಾಗಲೇ ಮತ್ತೊಂದು ಮದುವೆಯಾಗಬಾರದು. ಸೇವಾ ನಿಯಮಗಳ ಪ್ರಕಾರ ಏಕಕಾಲಕ್ಕೆ ಇಬ್ಬರು ಮಹಿಳೆಯರನ್ನು ಮದುವೆಯಾಗುವಂತಿಲ್ಲ. ಈ ರೀತಿ ಮಾಡಿದರೆ ನಿಯಮ ಉಲ್ಲಂಘಿಸಿದಂತಾಗುತ್ತದೆ. ಯಾವುದೇ ಜಾತಿ, ಧರ್ಮದ ಹೊರತಾಗಿ ಎಲ್ಲ ಸರ್ಕಾರಿ ನೌಕರರಿಗೂ ಈ ನಿಯಮ ಅನ್ವಯಿಸುತ್ತದೆ. ಆದರೆ ಅನಿಲ್ ಪೈಕ್ರಾ ಇಬ್ಬರು ಮಹಿಳೆಯರನ್ನು ವಿವಾಹವಾಗಿದ್ದಾರೆ. ಈ ಮೂಲಕ ಮುಂದೆ ಅವರಿಗೆ ಸಮಸ್ಯೆಯಾಗಲಿದೆ ಎಂದು ಸಿಆರ್ ಪಿಎಫ್ ವಕ್ತಾರ ಬಿಸಿ ಪತ್ರ ಅವರು ಹೇಳಿದ್ದಾರೆ.