ಕ್ರೀಡೆ

1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಮೃತಪಟ್ಟ 78 ವರ್ಷದ ವೃದ್ಧ.

By admin

November 22, 2019

78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್‍ನ ಸಂಗ್ರೂರ್‍ನಲ್ಲಿ ನಡೆದಿದೆ. ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಬಕ್ಷೀಶ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಶನಿವಾರ ಈ ಅಥ್ಲೆಟಿಕ್ ಮೀಟ್ ಆಯೋಜಿಸಲಾಗಿತ್ತು. 1500 ಮೀ. ಓಟದಲ್ಲಿ ಬಕ್ಷೀಶ್ ಚಿನ್ನದ ಪದಕ ಗೆದ್ದಿದ್ದರು ಎಂದು ಸಂಬಂಧಿ ಮಹಿಂದರ್ ಸಿಂಗ್ ವರ್ಕ್ ತಿಳಿಸಿದ್ದಾರೆ. ಬಕ್ಷೀಶ್ ತಮ್ಮ ಓಟವನ್ನು ಪೂರ್ಣಗೊಳಿಸಿದ್ದು ಸಂತಸ ತಂದಿದೆ ಎಂದು ಜೊತೆಯಲ್ಲಿದ್ದವರಿಗೆ ಹೇಳಿದ್ದರು.

ವಿಶ್ರಾಂತಿ ಪಡೆಯಲು ಬಕ್ಷೀಶ್ ಮೊದಲು ತಮ್ಮ ಉಡುಪನ್ನು ಧರಿಸಲು ಹೋಗಿದ್ದರು. ಆದರೆ ಅವರಿಗೆ ತಮ್ಮ ಉಡುಪನ್ನು ಧರಿಸಲು ಆಗಲಿಲ್ಲ. ಈ ವೇಳೆ ಬಕ್ಷೀಶ್ ಅಲ್ಲಿಯೇ ಕುಸಿದು ಬಿದ್ದರು. ಬಕ್ಷೀಶ್‍ಗೆ ಓಡುವುದು ಎಂದರೆ ತುಂಬಾ ಇಷ್ಟ. ಅಲ್ಲದೆ ಅವರು ಯಾವಾಗಲೂ ನಾನು ಸತ್ತರೆ ಮೈದಾನದಲ್ಲಿಯೇ ಆಟಗಾರನಾಗಿ ಸಾಯಬೇಕು ಎಂದು ಹೇಳುತ್ತಿದ್ದರು ಎಂದು ಬಕ್ಷೀಶ್ ಸ್ನೇಹಿತರು ತಿಳಿಸಿದ್ದಾರೆ.ಬಕ್ಷೀಶ್ ಸಿಂಗ್ ಮೊದಲು ಸೈನ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿವೃತ್ತಿ ಪಡೆದ ಬಳಿಕ ಅವರು ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. 1982ರಲ್ಲಿ ಅವರು ಕ್ರೀಡೆಯಲ್ಲಿ ಭಾಗವಹಿಸಲು ಶುರು ಮಾಡಿದ್ದರು. ಬಕ್ಷೀಸ್ ಅವರು ಇವರೆಗೂ 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಬಕ್ಷೀಶ್ 800, 1500 ಹಾಗೂ 5000 ಮೀ. ಓಡುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು.