ಸುದ್ದಿ

ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆಯನ್ನು ಬಗೆಹರಿಸಿ ಅಂತೀರಾ… ಆಕ್ರೋಶದಿಂದ ಸಿಎಂ !

By admin

June 26, 2019

ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.

ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.

ನಂತರ ಬಸ್‍ನಲ್ಲೇ ಕುಳಿತು ಮನವಿ ಸ್ವೀಕಾರ ಮಾಡಿದ ಮುಖ್ಯಮಂತ್ರಿಗಳು, ಮಾನ್ವಿ ತಾಲೂಕಿನ ಕಲ್ಲೂರಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಮತ್ತು ಪದವಿ ಕಾಲೇಜು ತೆರಯುವ ಭರವಸೆ ನೀಡಿದರು. ಇದೇ ವೇಳೆ ಕಿವಿ ಕೇಳದ ಗ್ರಾಮದ ಮಗುವೊಂದರ ಚಿಕಿತ್ಸೆಗೆ ಹಣ ನೀಡುವ ಭರವಸೆ ನೀಡಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಸೂಚನೆ ನೀಡಿದರು.