ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ, ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ.
ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ ಯಾವುದೇ ಪೋಲಿಸರು ಇಲ್ಲದೆ ವಾಹನಸಾವರರು ಈ ರೀತಿ ಮಾಡುತ್ತಿದ್ದಾರೆ. ಕೂಡಲೇ ಅಪಾಯದ ಮಟ್ಟ ಮೀರಿ ನೀರು ಹರಿಯುವ ಸ್ಥಳಗಳಲ್ಲಿ ಪೋಲಿಸರನ್ನು ನಿಯೋಜಿಸುವಂತೆ ಜನರು ಒತ್ತಾಯಿಸಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮ ವಹಿಸಬೇಕಾಗಿದೆ.
ಇತ್ತ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಮುಂದುವರಿದಿದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ವೇದಗಂಗಾ, ಧೂಧಗಂಗಾ ಮತ್ತು ಕೃಷ್ಣಾ ನದಿ ನೀರಿನಲ್ಲಿ ಭಾರೀ ಏರಿಕೆಯಾಗಿದೆ. ಕೃಷ್ಣಾ ನದಿ ನೀರಿನ ಒಳಹರಿವು ಸುಮಾರು 1,09,211 ಲಕ್ಷ ಕ್ಯೂಸೆಕ್ ಆಗಿದ್ದು, ಹಿಪ್ಪರಗಿ ಜಲಾಶಯದಿಂದ 97,300 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮಳೆಯಿಂದ 6 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.
ಕೃಷ್ಣಾ ನದಿಯ ಕಲ್ಲೋಳ-ಯಡೂರು, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ವೇದಗಂಗಾ ನದಿಯ ಭೋಜವಾಡಿ-ಕುನ್ನೂರು, ಜತ್ರಾಟ-ಭಿವಶಿ, ಅಕ್ಕೋಳ -ಸಿದ್ನಾಳ ಸೇತುವೆಗಳು ಮುಳುಗಡೆಯಾಗಿವೆ. ಅಪಾಯದ ಮಟ್ಟ ಮೀರಿ ನದಿ ನೀರು ಹರಿಯುತ್ತಿದ್ದರೂ ಸೇತುವೆಗಳ ಮೇಲೆ ಜನರು ಸಂಚರಿಸುತ್ತಿದ್ದಾರೆ. ಅಧಿಕಾರಿಗಳ ಎಚ್ಚರಿಕೆಯ ಸಂದೇಶಕ್ಕೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ ಮುಳುಗಡೆ ಹಂತದಲ್ಲಿದ್ದು, ದೇವದುರ್ಗಾ ತಾಲೂಕಿನ ಹೂವಿನಹಡಗಲಿ ಸೇತುವೆ ಮುಳುಗುವ ಸಾಧ್ಯತೆಯಿದೆ. ಸೇತುವೆ ಮುಳುಗಿದರೆ ಕಲಬುರಗಿ-ದೇವದುರ್ಗ ಮಧ್ಯೆ ವಾಹನ ಸಂಚಾರ ಸ್ಥಗಿತವಾಗಲಿದೆ. ಕೃಷ್ಣಾ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸುವಂತೆ, ನದಿಯಲ್ಲಿ ತೆಪ್ಪ ಹಾಕದಂತೆ ಸ್ಥಳೀಯರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.