ಕೊಡಗು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವ ಮೂಲಕ ಮಾದರಿಯಾಗಿದ್ದರೆ. ತಮ್ಮ ಪುಟ್ಟ ಮಗಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸಿ ಕನ್ನಡ ಕಲಿಗೆ ಒತ್ತು ನೀಡಿದ್ದಾರೆ.ಗ್ರಾಮೀಣ ಮಕ್ಕಳೊಂದಿಗೆ ಬೆರೆಯುವ ಉದ್ದೇಶದಿಂದ ಮಗುವನ್ನು ಅಂಗನವಾಡಿಗೆ ನಿತ್ಯವೂ ಕಳಿಸಿ ತಾವು ಕೆಲಸಕ್ಕೆ ತೆರಳುತ್ತಾರೆ ಸುಮನ್.
ಕಲಿಕೆ, ಆಟ, ಊಟದ ಜೊತೆಗೆ ಮಕ್ಕಳೊಂದಿಗೆ ಈ ಅಂಗನವಾಡಿಯಲ್ಲಿ ಎಸ್‍ಪಿ ಮಗಳು ಸಹ ಬೆರೆಯುತ್ತಿದ್ದಾಳೆ. ಸಾಮಾನ್ಯರ ಮಕ್ಕಳಂತೆ ಸರ್ಕಾರಿ ಅಂಗನವಾಡಿಯಲ್ಲಿ ಎಸ್‍ಪಿ ಪುತ್ರಿ ಖುಷಿ ಸಹ ಪಾಠ ಕಲಿಯುತ್ತಿದ್ದಾಳೆ. ಸಾಮಾನ್ಯವಾಗಿ ಸರ್ಕಾರಿ ಕೆಲಸದಲ್ಲಿ ಇರುವವರ ಮಕ್ಕಳನ್ನು ದುಬಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಆದರೆ ಸುಮನ್ ಅವರು ಸರ್ಕಾರಿ ಅಂಗನವಾಡಿಗೆ ಮಗಳನ್ನು ಸೇರಿಸಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಅಂಗನವಾಡಿ ಶಿಕ್ಷಕಿ ನೀತು ಮಾತನಾಡಿ, ಗ್ರಾಮೀಣ ಪೊಲೀಸ್ ಠಾಣೆಗೆ ಅಂಗನವಾಡಿ ಹತ್ತಿರವಾಗಿದೆ. ಸೋಮವಾರ ಎಸ್.ಪಿ ಅವರು ತಮ್ಮ ಮಗಳನ್ನು ಅಂಗನವಾಡಿಗೆ ದಾಖಲಿಸಿದ್ದಾರೆ. ಅವರ ಮಗಳು ಮಾತ್ರವಲ್ಲದೆ ಪೊಲೀಸ್ ಇನ್‍ಸ್ಪೆಕ್ಟರ್ ಮಗು ಸೇರಿದಂತೆ ಇತರೆ 5 ಮಂದಿ ಪೊಲೀಸ್ ಸಿಬ್ಬಂದಿಯ ಮಕ್ಕಳು ಕೂಡ ಇಲ್ಲಿ ದಾಖಲಾತಿ ಪಡೆದಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಎಸ್.ಪಿ ಸುಮನ್ ಅವರು ಮಗಳನ್ನು ಅಂಗನವಾಡಿಗೆ ಸೇರಿಸಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಬಗ್ಗೆ ತಿಳಿದ ಸಾಕಷ್ಟು ಮಂದಿ ಅಂಗನವಾಡಿಗೆ ಭೇಟಿ ಕೊಟ್ಟು ಖುಷಿ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಂಗನವಾಡಿ ಸಿಬ್ಬಂದಿ ತಿಳಿಸಿದರು.