ಸುದ್ದಿ

ಕೇವಲ ಒಂದೇ ವಾರದಲ್ಲಿ ತನ್ನ ಊರಿಗೆ ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಮಾಂಜಿ..!

By admin

April 26, 2019

ತನ್ನ ಹೆಂಡತಿಗಾಗಿ ರಸ್ತೆಯನ್ನೇ ನಿರ್ಮಿಸಿದ್ದ ಮಾಂಜಿಯ ಕಥೆ ನಮಗೆಲ್ಲಾ ಗೊತ್ತಿದೆ. ಇದೀಗ ಕೀನ್ಯಾದಲ್ಲೂ ಒಬ್ಬ ಮಾಂಜಿ ಇದ್ದಾರೆ. ಆದ್ರೆ, ಈತ ತನ್ನ ಹೆಂಡತಿಗಾಗಿ ಅಲ್ಲ, ಇಡೀ ಊರಿನ ಜನರಿಗೆ ನೆರವಾಗಲಿ ಅಂತ ತಾನೇ ರಸ್ತೆ ನಿರ್ಮಿಸಿ ಈಗ ಎಲ್ಲರ ದೃಷ್ಟಿಯಲ್ಲೂ ಹೀರೋ ಆಗಿದ್ದಾರೆ.

ಕೀನ್ಯಾದ ಕಗಂಡಾ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶವಿದೆ. ಅದರ ಬಳಿ ವಾಸಿಸುವ ಜನರಿಗೆ ಊರಿನ ಸಂಪರ್ಕ ಮಾಡೋಕೆ ಸರಿಯಾದ ರಸ್ತೆಯೇ ಇರಲಿಲ್ಲ. ಈ ಬಗ್ಗೆ ಗ್ರಾಮದ ನಿಕೋಲಸ್ ಮುಚಾಮಿ ಹಲವು ಬಾರಿ ಸರ್ಕಾರಕ್ಕೆ ಹಾಗೂ ಸ್ಥಳೀಯ ನಾಯಕರಿಗೆ ಮನವಿ ಮಾಡಿದ್ದರು.

ಊರಿನಿಂದ ಶಾಪಿಂಗ್ ಸೆಂಟರ್, ಚರ್ಚ್, ಬೇರೆ ಏನೇ ಬೇಕಂದ್ರೂ ಹೋಗೋಕೆ ಕಷ್ಟವಾಗುತ್ತೆ, ಸರಿಯಾದ ರಸ್ತೆ ನಿರ್ಮಿಸಿ ಕೊಡಿ ಅಂತ ಕೇಳಿದ್ರೂ ಯಾರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಮುಚಾಮಿ ತಾವೇ ಖುದ್ದು ಒಂದು ಕಿಲೋಮೀಟರ್ ದೂರ ರಸ್ತೆ ನಿರ್ಮಿಸಿದ್ದಾರೆ. ಕಡಿದಾದ ಗುಡ್ಡ, ಕಾಡು ಇರುವ ಮಾರ್ಗದಲ್ಲಿ ಮರಗಳನ್ನ ಕಡಿದು, ತನ್ನ ಬಳಿ ಇದ್ದ ಕೃಷಿ ಉಪಕರಣಗಳ ನೆರವಿನಿಂದಲೇ ಮುಚಾಮಿ 1 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಿಸಿದ್ದಾರೆ.

ಇದರಿಂದಾಗಿ ಈಗ ಇಲ್ಲಿನ ಜನ ಸುಲಭವಾಗಿ ರಸ್ತೆ ಬಳಸಿ ಕಗಂಡಾ ಶಾಪಿಂಗ್ ಸೆಂಟರ್​​ಗೆ ಹಾಗೂ ಚರ್ಚ್​ಗೆ ಹೋಗಬಹುದು. ಜನರ ಸಮಯ ಉಳಿಸಲು ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗಲಿ ಅಂತ ನಾನು ಈ ರಸ್ತೆ ನಿರ್ಮಿಸಿದೆ ಅಂತ ಮುಚಾಮಿ ಹೇಳ್ತಾರೆ. ಇದಕ್ಕಾಗಿ 6 ದಿನಗಳ ಕಾಲ ಏಕಾಂಗಿಯಾಗಿ ಕಷ್ಟಪಟ್ಟಿದ್ದು, ಪ್ರತಿನಿತ್ಯ ಬೆಳಗ್ಗೆ 6ರಿಂದ ಸಂಜೆ 6ವರೆಗೂ ಶ್ರಮ ವಹಿಸುತ್ತಿದ್ದರಂತೆ.