ಸುದ್ದಿ

ನಟಿ ಕಾಜಲ್‍ಗಾಗಿ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡ ಅಭಿಮಾನಿ…!

By admin

August 05, 2019

ನೆಚ್ಚಿನ ನಟ ನಟಿಯರನ್ನ ನೋಡುವ, ಭೇಟಿ ಮಾಡುವ ಆಸೆ ಪ್ರತಿಯೊಬ್ಬ ಅಭಿಮಾನಿಗೂ ಇರುತ್ತೆ. ಆದ್ರೆ ಹುಚ್ಚು ಅಭಿಮಾನಕ್ಕೆ ಸಿಲುಕಿ ಅದೆಷ್ಟೋ ಅಭಿಮಾನಿಗಳು, ಹಣ, ಪ್ರಾಣ ಹಾನಿ ಮಾಡಿಕೊಂಡಿದ್ದನ್ನ ಕೂಡ ನಾವು ಹಿಂದೆ ಅನೇಕ ಭಾರಿ ನೋಡಿದ್ದೇವೆ. ಇದೀಗ ಇಂಥಹದ್ದೇ ಮತ್ತೊಂದು ಘಟನೆ ನಡೆದಿದ್ದು, ದಕ್ಷಿಣ ಭಾರತದ ಪ್ರಖ್ಯಾತ ನಟಿಯನ್ನು ನೋಡುವ ಆಸೆಯಿಂದ ಅಭಿಮಾನಿಯೋರ್ವ 60 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಗರ್‌ವಾಲ್ ನ ಅಪ್ಪಟ ಅಭಿಮಾನಿ. ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಆಗಬೇಕು ಎಂದುಕೊಂಡಿದ್ದನು. ಈ ವೇಳೆ ‘ನಿಮ್ಮ ನೆಚ್ಚಿನ ನಟಿಯನ್ನ ಭೇಟಿ ಮಾಡುವ ಅವಕಾಶ’ ನಿಮಗೆ ಸಿಗಲಿದೆ ಎಂಬ ಪ್ರಕಟಣೆಯನ್ನು ಇನ್ಸ್ಟಾಗ್ರಾಮ್ ನಲ್ಲಿ ಗಮನಿಸಿದ್ದಾನೆ. ನಂತರ ಆ ಅಭಿಮಾನಿ ವೆಬ್‍ಪೇಜ್ ಆಡ್ಮಿನ್‍ನನ್ನು ಸಂಪರ್ಕಿಸಿ ಕಾಜಲ್‍ರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದನು.

ಪ್ರಕಟಣೆ ಕೆಲವು ನಟಿಯರ ಪೈಕಿ ನಿಮ್ಮ ಕಾಜಲ್ ಅಗರ್ ವಾಲ್ ಅವರ ಫೋಟೋ ಕೂಡ ಹಾಕಲಾಗಿದ್ದು, ಅದರ ಮೇಲೆ ಕ್ಲಿಕ್ ಮಾಡಿದ ಯುವಕ ಮುಂದುವರೆಸುತ್ತಾ ಹೋಗಿದ್ದಾನೆ. ಆ ಪೇಜ್ ನಲ್ಲಿ ವ್ಯಕ್ತಿಗತವಾದ ಕೆಲವು ವಿವರಗಳನ್ನ ಕೇಳಲಾಗಿತ್ತು. ಕಾಜಲ್ ಭೇಟಿ ಮಾಡಬಹುದು ಎಂಬ ಆಸೆಯಿಂದ ಆ ಯುವಕ ತನಗೆ ಸಂಬಂಧಿಸಿದ ವಿವರಗಳನ್ನ ನೀಡಿದ್ದಾರೆ. ಜೊತೆಗೆ ಕೆಲವು ಫೋಟೊಗಳನ್ನು ಸಹ ಶೇರ್ ಮಾಡಿಕೊಂಡಿದ್ದಾನೆ. ಆತನ ಫೋಟೊಗಳನ್ನು ಗಮನಿಸಿದ ಸೈಬರ್ ಕಳ್ಳರು ಈತ ಶ್ರೀಮಂತ ಮನೆತನದ ಎಂಬುವುದನ್ನು ಅರಿತು ಆತನ ಫೋಟೋಗಳನ್ನು ಉಪಯೋಗಿಸಿ ಮಾರ್ಫಿಂಗ್ ಮಾಡಿ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾರೆ.

ವೆಬ್‍ಪೇಜ್ ಆಡ್ಮಿನ್ ಮೊದಲು ಅಭಿಮಾನಿಯ ಬಳಿ 50 ಸಾವಿರ ರೂ. ತೆಗೆದುಕೊಂಡಿದ್ದಾನೆ. ವೈಯಕ್ತಿಕ ಫೋಟೋವನ್ನು ಮಾರ್ಫ್ ಮಾಡಿ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡುತ್ತೇವೆ ಎಂದು ಹೆದರಿಸಿ 60 ಲಕ್ಷ ರೂ. ಕಸಿದುಕೊಂಡಿದ್ದಾರೆ. ಅಭಿಮಾನಿ 60 ಲಕ್ಷ ರೂ. ಕಳೆದುಕೊಂಡ ಮೇಲೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ.