ಶಾಸಕ ಆನಂದ್‍ಸಿಂಗ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಇನ್ನಷ್ಟು ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಶುಕ್ರವಾರದೊಳಗೆ 8ರಿಂದ 13 ಮಂದಿ ಶಾಸಕರು ಯಾವುದೇ ಕ್ಷಣದಲ್ಲಾದರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಆಪರೇಷನ್ ಕಮಲ ಆಷಾಢ ಪರ್ವ ಆರಂಭವಾಗಿದೆ.
ಶಾಸಕರಾದ ಪ್ರತಾಪ್‍ಗೌಡ ಪಾಟೀಲ್(ಮಸ್ಕಿ), ಬಸವರಾಜ್ ದದ್ದಲ್ (ರಾಯಚೂರು ಗ್ರಾಮೀಣ), ಬಿ.ಸಿ.ಪಾಟೀಲ್ (ಹಿರೇಕೆರೂರು), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್‍ಕುಮಟಳ್ಳಿ (ಅಥಣಿ), ಮಹಂತೇಶ್ ಕೌಜಲಗಿ (ಬೈಲಹೊಂಗಲ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಜೆ.ಗಣೇಶ್ (ಕಂಪ್ಲಿ), ಶ್ರೀಮಂತಗೌಡ ಪಾಟೀಲ್ (ಕಾಗವಾಡ), ಜೆಡಿಎಸ್‍ನ ಕೆ.ಆರ್.ನಾರಾಯಣಗೌಡ (ಕೆ.ಆರ್.ಪೇಟೆ), ಎಚ್.ಕೆ.ಕುಮಾರಸ್ವಾಮಿ (ಸಕಲೇಶಪುರ) ಹಾಗೂ ಮಹದೇವ್ (ಪಿರಿಯಾಪಟ್ಟಣ) ಸೇರಿದಂತೆ ಇನ್ನೂ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಎಲ್ಲಾ ಶಾಸಕರು ಒಂದೇ ಹಂತದಲ್ಲಿ ರಾಜೀನಾಮೆ ನೀಡುವ ಬದಲು ಹಂತ ಹಂತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಮೂಲಗಳ ಪ್ರಕಾರ ಕಳೆದವಾರ ಎಲ್ಲಾ ಭಿನ್ನಮತೀಯ ಶಾಸಕರು ಒಂದೆಡೆ ಸೇರಿ ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದ್ದರು.ಯಾರು, ಯಾವಾಗ ರಾಜೀನಾಮೆ ನೀಡಬೇಕೆಂಬುದು ಈಗಾಗಲೇ ತೀರ್ಮಾನವಾಗಿದ್ದು, ಅಧಿವೇಶನ ಆರಂಭಕ್ಕೂ ಮುನ್ನವೇ ದೋಸ್ತಿ ಸರ್ಕಾರಕ್ಕೆ ರೆಬೆಲ್ ಶಾಸಕರು ಮರ್ಮಾಘಾತ ನೀಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆ ಮಾಡಲು ಕೇಂದ್ರ ವರಿಷ್ಠರು ಕೂಡ ರಾಜ್ಯ ನಾಯಕರಿಗೆ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ನೀಡಿ ಪಕ್ಷಕ್ಕೆ ಬರುವ ಶಾಸಕರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಅಂದರೆ ಸಚಿವ ಸ್ಥಾನ, ಉಳಿದವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಆಶ್ವಾಸನೆ ನೀಡಲಾಗಿದೆ. ಅತೃಪ್ತಗೊಂಡ ಶಾಸಕರು ಪಕ್ಷಕ್ಕೆ ಬರಲು ಸಿದ್ಧರಿರುವಾಗ ತಡಮಾಡದೆ ಸರ್ಕಾರ ರಚನೆಗೆ ಮುಹೂರ್ತ ನಿಗದಿ ಮಾಡಿ ಎಂದು ಕೇಂದ್ರ ವರಿಷ್ಠರು ಕಳೆದ ತಿಂಗಳೇ ಸೂಚನೆ ಕೊಟ್ಟಿದ್ದರು.ಅದರಂತೆ ಭಿನ್ನಮತೀಯರು ಒಬ್ಬಬ್ಬರಾಗಿಯೇ ರಾಜೀನಾಮೆ ಕೊಡುವ ಮೂಲಕ ದೋಸ್ತಿ ಸರ್ಕಾರದ ಪತನಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ.ಈ ಹಿಂದೆ ಆಪರೇಷನ್ ಕಮಲ ಬಜೆಟ್ ಮಂಡನೆಗೂ ಮುನ್ನವೇ ನಡೆಯಬೇಕಾಗಿತ್ತು.
ಆದರೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಮಾಡಿಕೊಂಡ ಯಡವಟ್ಟು ಬಿಜೆಪಿಗೆ ತಿರುಗು ಬಾಣವಾಗಿತ್ತು. ಹೀಗಾಗಿ ಬಿಜೆಪಿ ಕೆಲ ದಿನಗಳ ಮಟ್ಟಿಗೆ ಆಪರೇಷನ್ ಕಮಲ ತೆರೆಮರೆಗೆ ಸರಿದಿತ್ತು. ಇದೀಗ ಮತ್ತೆ ಚಾಲ್ತಿಗೆ ಬಂದಿದೆ.