ಸುದ್ದಿ

ಜಪಾನ್‍ನಲ್ಲಿ ನಿರ್ಮಾಣಗೊಂಡಿರುವ ಫ್ಲೈಯಿಂಗ್ ಕಾರು ತನ್ನ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿಗೊಂಡಿದೆ,.!

By admin

September 21, 2019

ರಸ್ತೆ ಮೇಲೆ ಚಲಿಸುವ ಕಾರುಗಳು ಗಗನದಲ್ಲಿ ಹಾರುವಂತಿದ್ದರೆ..? ನೀವು ಹಾಲಿವುಡ್ ಸಿನಿಮಾಗಳಲ್ಲಿ ಅದರಲ್ಲೂ ಜೇಮ್ಸ್‍ಬಾಂಡ್ ಚಿತ್ರಗಳಲ್ಲಿ ಇದನ್ನು ನೋಡಿರುತ್ತೀರಿ. ಜಪಾನ್‍ನಲ್ಲಿ ನಿರ್ಮಾಣಗೊಂಡಿರುವ ಫ್ಲೈಯಿಂಗ್ ಕಾರು ತನ್ನ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿಯಾಗಿದೆ.

ಈ ವಿಶ್ವ ಬಹು ಕಾತುರದಿಂದ ನಿರೀಕ್ಷಿಸುತ್ತಿರುವ ಹಾರುವ ಕಾರುಗಳು ಇನ್ನು ಕೆಲವೇ ತಿಂಗಳುಗಳಲ್ಲಿ ವಾಣಿಜ್ಯ ಮಾರಾಟಕ್ಕೆ ಲಭ್ಯವಾಗಲಿದೆ. ಜಪಾನಿನ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ತಯಾರಿಕೆ ಸಂಸ್ಥೆ ಎನ್‍ಇಸಿ ಕಾಪೆರ್ರೇಷನ್ ಅಭಿವೃದ್ದಿಗೊಳಿಸಿರುವ ಪುಟ್ಟ ಹಾರುವ ಕಾರಿನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.

ಇದನ್ನು ಇದೇ ಮೊದಲ ಬಾರಿ ಪ್ರಯೋಗಕ್ಕೆ ಒಳಪಡಿಸಲಾಯಿತು. ಇದು ಗಾಳಿಯಲ್ಲಿ ಕೆಲವು ನಿಮಿಷಗಳ ಕಾಲ ಹಾರಾಡುವಲ್ಲಿ ಸಫಲವಾಯಿತು. ಆಟೋರಿಕ್ಷಾದಷ್ಟು ಗಾತ್ರವಿರುವ ಈ ಕಾರು ನಾಲ್ಕು ಸಮನಾಂತರ ಪ್ರೊಪೆಲ್ಲರ್‍ಗಳನ್ನು ಹೊಂದಿವೆ. ಡ್ರೋಣ್ ರೀತಿಯ ಪ್ರೋಟೊಟೈಪ್ ಫ್ಲೈಯಿಂಗ್ ಕಾರನ್ನು ಜಪಾನ್ ರಾಜಧಾನಿ ಟೋಕಿಯೋದ ಚಿಬಾದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು.

ಇದು 19 ಅಡಿಗಳಷ್ಟು ಎತ್ತರದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿತು. ಈ ಫ್ಲೈಯಿಂಗ್ ಕಾರನ್ನು ಆರಂಭದಲ್ಲಿ ಮಾನವರಹಿತ ಸರಕು ಸಾಗಣೆಗಾಗಿ ಬಳಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಜಪಾನ್ ಸರ್ಕಾರ ಈ ಹಾರುವ ಕಾರುಗಳನ್ನು 2023ರ ವೇಳೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿದೆ. ಪ್ರಾರಂಭದಲ್ಲಿ ಇದನ್ನು ಸರಕುಗಳ ಸಾಗಣೆಗೆ ಬಳಸಲಾಗುತ್ತದೆ. ನಂತರ 2030ರಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಫ್ಲೈಯಿಂಗ್ ಕಾರುಗಳನ್ನು ವಿಸ್ತರಣೆ ಮಾಡಲಾಗುವುದು.