ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ನಾಯಕತ್ವವನ್ನೇ ನಿರ್ನಾಮ ಮಾಡಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಜೊತೆಗೆ ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ.
ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು ಖಂಡಿತಾ ಕೊಂದು ಹಾಕುತ್ತೇವೆ ಎಂದು ಹೇಳಿದ್ದಾರೆ. ಅಂತೆಯೇ ಉಗ್ರರಿಗೆ ಶರಣಾಗತಿಗೆ ಒಂದು ಅವಕಾಶ ನೀಡುತ್ತೇವೆ. ಉಗ್ರತ್ವ ಬಿಟ್ಟು ಶರಣಾಗತಿಯಾದರೆ ಬದುಕಲು ಒಂದು ಅವಕಾಶ ನೀಡುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನೂ ಕೊಂದು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪುಲ್ವಾಮಾ ದಾಳಿಯ ಸಂಚುಕೋರನ ಹತ್ಯೆಯಾದ ಬಳಿಕ ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಯಾರೆಲ್ಲ ಸ್ಥಳೀಯ ಉಗ್ರರ ಜೊತೆ ಸೇರಿದ್ದಾರೋ ಅವರೆಲ್ಲರೂ ಶರಣಾಗಬೇಕು. ತಾಯಂದಿರು ಮಕ್ಕಳನ್ನು ಶರಣಾಗುವಂತೆ ಮಾಡಬೇಕು ಎಂದು ಸೇನಾ ಅಧಿಕಾರಿಗಳು ಈ ವೇಳೆ ಮನವಿ ಮಾಡಿದರು.
ಪಾಕಿಸ್ತಾನ ಮುಂದಾಳತ್ವದ ಭಯೋತ್ಪಾದಕ ಸಂಘಟನೆಗಳನ್ನು ಕಾಶ್ಮೀರದ ಕಣಿವೆಯಿಂದ ಸಂಪೂರ್ಣವಾಗಿ ನಾವು ನಿರ್ಮೂಲನೆ ಮಾಡುತ್ತೇವೆ. ದೇಶವೂ ಗನ್ ಹಿಡಿದ ಕಾಶ್ಮೀರಿ ಯುವಕರಿಗೆ ಶರಣಾಗುವ ಅವಕಾಶವನ್ನು ನೀಡಿದೆ. ಈ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಅವಕಾಶ ನೀಡಲಾಗಿದೆ ಎಂದು ಸೇನಾ ಲೆಫ್ಟಿನೆಂಟ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೊನ್ ಹೇಳಿದರು.
ಸೋಮವಾರ ನಡೆದ 16 ಗಂಟೆಗಳ ಎನ್ಕೌಂಟರ್ನಲ್ಲಿ ಹತ್ಯೆಯಾದವರನ್ನು ಕಮ್ರಾನ್, ಅಬ್ದುಲ್ ರಷೀದ್ ಅಲಿಯಾಸ್ ಘಾಜಿ ಹಾಗೂ ಹಿಲಾಲ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಅಬ್ದುಲ್ ರಷೀದ್ ಎಂಬಾತ ಪುಲ್ವಾಮದ ಉಗ್ರ ದಾಳಿಯ ಸೂತ್ರಧಾರ ಎನ್ನಲಾಗಿದೆ. ಇನ್ನು, ಅಬ್ದುಲ್ ರಷೀದ್ ಮತ್ತು ಕಮ್ರಾನ್ ಇಬ್ಬರೂ ಕೂಡ ಜೈಷೆ ಮೊಹಮ್ಮದ್ ಸಂಘಟನೆಯ ಡಿವಿಷನಲ್ ಕಮಾಂಡರ್ ಆಗಿದ್ದರು.