ಸಾಧನೆ

ಸೆಮಿಫೈನಲ್‍ನಲ್ಲಿ ಪಾಕ್ ವಿರುದ್ಧ ಶತಕ ಸಿಡಿಸಿದ ಪಾನಿಪುರಿ ಮಾರುತ್ತಿದ್ದ 18ರ ಪೋರ ಜೈಸ್ವಾಲ್

By admin

February 05, 2020

ಅಂಟರ್ 19 ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧ 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಮಿಂಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ 18 ವರ್ಷದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 7ನೇ ಬಾರಿ ಭಾರತ ಫೈನಲ್ ಪ್ರವೇಶಿಸಿದೆ. 3 ಓವರ್ ಬೌಲಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಕೇವಲ 11 ರನ್ ನೀಡಿ, ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.

ಕೆಲವು ವರ್ಷಗಳ ಹಿಂದೆ ಮುಂಬೈನ ಜನನಿಬಿಡ ಪ್ರದೇಶದಲ್ಲಿ ವಾಸಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಇಂದು ಭಾರತೀಯ ಕ್ರಿಕೆಟ್‍ನಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ, ಯಶಸ್ವಿ ದೇಶೀಯ ಕ್ರಿಕೆಟ್‍ನಲ್ಲಿ ದ್ವಿಶತಕ ಬಾರಿಸಿ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಶತಕ ಸಾಧನೆ ಮಾಡಿದ್ದಾರೆ.

ಆದರೆ ಸೆಲೆಬ್ರಿಟಿಗಳಿಗೆ ಎಲ್ಲವೂ ಅಷ್ಟು ಸುಲಭವಲ್ಲ. ಮುಂಬೈನ ಭಾರತೀಯ ಕ್ರಿಕೆಟ್ ದೈತ್ಯರ ಮುಂದೆ ತನ್ನ ಛಾಪು ಮೂಡಿಸಲು ಯಶಸ್ವಿ 10ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಭಾದೋಹಿ ತೊರೆದಿದ್ದರು. ಆ ಬಳಿಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ಕ್ರಿಕೆಟಿಗನಾಗುವ ಮೂಲಕ ದೇಶಕ್ಕಾಗಿ ಆಡುವ ಕನಸು ಹೊತ್ತಿದ್ದ ಯಶಸ್ವಿ ಮುಂದೆ ಅನೇಕ ಸವಾಲುಗಳು ಎದುರಾದವು. ಆದರೆ ಎಲ್ಲವನ್ನೂ ಸ್ಥಿರವಾಗಿ ಎದುರಿಸಿದ ಯಶಸ್ವಿ ಜೈಸ್ವಾಲ್ ಮುಂಬೈನ ಬೀದಿಯ ಅಂಗಡಿಯೊಂದರಲ್ಲಿ ಪಾನಿಪುರಿ ಮಾರುತ್ತಿದ್ದರು.

ಯಶಸ್ವಿ ಜೈಸ್ವಾಲ್ 12ನೇ ವಯಸ್ಸಿನಲ್ಲಿ ರಾಜ ಶಿವಾಜಿ ವಿದ್ಯಾಮಂದಿರ್ (ದಾದರ್) ವಿರುದ್ಧದ ಪಂದ್ಯದಲ್ಲಿ 319 ರನ್ ಗಳಿಸಿದ್ದರು. ಜೈಸ್ವಾಲ್ 2014ರ ಜನವರಿಯಲ್ಲಿ ಅಂಜುಮಾನ್ ಇಸ್ಲಾಂ ಪ್ರೌಢಶಾಲೆ (ಕೋಟೆ) ಪರ ಆಡುತ್ತಿದ್ದರು. ಗೈಲ್ಸ್ ಶೀಲ್ಡ್ ಸ್ಕೂಲ್ ಪಂದ್ಯದಲ್ಲಿ ಅವರು ತ್ರಿಶತಕ ಸಿಡಿಸಿದ್ದರು. ಜೊತೆಗೆ 99ರನ್ ನೀಡಿ 13 ವಿಕೆಟ್ ಪಡೆದಿದ್ದರು. ಕಳೆದ ವರ್ಷ ದೇಶಿ ಕ್ರಿಕೆಟ್‍ನಲ್ಲಿ ಜಾರ್ಖಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದರು. ಈ ಮೂಲಕ ಲಿಸ್ಟ್-ಎ ಟೀಂನಲ್ಲಿ ದ್ವಿಶತಕ ಬಾರಿಸಿದ ಏಳನೇ ಭಾರತೀಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದರು.

ಈ ಹಿಂದೆ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಟೀಂ ಇಂಡಿಯಾ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ, ಶಿಖರ್ ಧವನ್, ಕರ್ಣ ಕೌಶಲ್ ಮತ್ತು ಸ್ಯಾಮ್ಸನ್ ದ್ವಿಶತಕ ಸಾಧನೆ ಮಾಡಿದ್ದಾರೆ. ಅದರಲ್ಲೂ ಹಿಟ್‍ಮ್ಯಾನ್ ರೋಹಿತ್ ಶರ್ಮ ಅತಿ ಹೆಚ್ಚು ದ್ವಿಶತಕ ಗಳಿಸಿದ್ದಾರೆ.