ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ವರುಣ ದೇವ ವಿಜೃಂಭಿಸಿದ ಕಾರಣ ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡ ತಾಜ್‍ಮಹಲ್‍ಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ಕಟ್ಟಡದ ಮುಖ್ಯಗೇಟ್ ಮತ್ತು ಎತ್ತರದ ಗುಮ್ಮಟದ ಕೆಳ ಭಾಗದ ಅಮೃತ ಶಿಲೆಯ ರೇಲಿಂಗ್‍ಗೆ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಾಧಿಯ ಮೇಲ್‍ಭಾಗಕ್ಕೆ ಹಾನಿಯಾಗಿದ್ದು, ತಾಜ್‍ಮಹಲ್ ಆವರಣದಲ್ಲಿದ್ದ ಕೆಲ ಮರಗಳು ಬುಡದ ಸಮೇತ ಕಿತ್ತು ಬಂದಿರುವುದಾಗಿ ಎಎಸ್‍ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಪ್ರಕೃತಿಯ ವೈಪರಿತ್ಯದ ಕಾರಣದಿಂದ ತಾಜ್‍ಮಹಲ್ ಹಾನಿಗೊಳಗಾಗಿತ್ತು. 2018ರ ಏಪ್ರಿಲ್‍ನಲ್ಲಿ ಸುರಿದ ಭಾರೀ ಮಳೆಗೆ ತಾಜ್‍ಮಹಲ್ ಪ್ರವೇಶ ದ್ವಾರದಲ್ಲಿದ್ದ ಪಿಲ್ಲರಿಗೆ ಹಾನಿಯಾಗಿತ್ತು.
ಉಳಿದಂತೆ ಉತ್ತರ ಪ್ರದೇಶದಲ್ಲಿ ಸಿಡಿಲಿಗೆ ಬಲಿಯಾದ 13 ಮಂದಿ ಕುಟುಂಬಗಳಿಗೆ ಯುಪಿ ಸಿಎಂ ಸಂತ್ವಾನ ತಿಳಿಸಿದ್ದಾರೆ. ಅಲ್ಲದೇ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ. ಇತ್ತ ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.