ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಅವರು, 17 ರಾಜ್ಯಗಳಲ್ಲಿ ಪ್ರತಿ ಶನಿವಾರ ರಜೆ ಜಾರಿಯಲ್ಲಿದೆ. 4 ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರಜೆಗೆ ಒತ್ತಾಯ ಇತ್ತು. ಜಯಂತಿಗಳು, ಹಬ್ಬಗಳನ್ನು ಕಡಿತ ಮಾಡಬೇಕಾ ಎಂಬ ಚರ್ಚೆ ನಡೆಯಿತು. ಆದರೆ ಆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅದರ ಬದಲಾಗಿ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ 15 ಸಾಂದರ್ಭಿಕ ರಜೆಯನ್ನು ಕಡಿತಗೊಳಿಸಿ 10ಕ್ಕೆ ಇಳಿಸಲಾಗಿದೆ ಎಂದರು.
ಎರಡನೇ ಶನಿವಾರ ರಜೆ ಎಲ್ಲಾ ಇಲಾಖೆಗಳಿಗೂ ಅನ್ವಯಿಸುವುದಾಗಿ ಸ್ಪಷ್ಟಪಡಿಸಿದ ಅವರು, ಮತ್ತೊಮ್ಮೆ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಸಂಬಂಧ ಸಭೆ ನಡೆಸಲಿದ್ದಾರೆ. ತಕ್ಷಣದಿಂದ ರಜೆ ಘೋಷಣೆಯಾಗುತ್ತಿಲ್ಲ. ಮುಂದಿನ ವರ್ಷದಿಂದ ಇದು ಜಾರಿಗೆ ಬರುವುದಾಗಿ ಅವರು ತಿಳಿಸಿದರು.ಕನಕ, ಬಸವ ಹಾಗೂ ವಾಲ್ಮೀಕಿ ಜಯಂತಿ ಸೇರಿದಂತೆ ಕೆಲ ಜಯಂತಿಗಳ ರಜೆ ಕಡಿತಗೊಳಿಸುವ ಬಗ್ಗೆ ಕಾಂಗ್ರೆಸ್-ಜೆಡಿಎಸ್ ಸಚಿವರು ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ರಜೆಗಳನ್ನು ರದ್ದು ಮಾಡದೇ, ಯಥಾವತ್ ಆಗಿ ಮುಂದುವರೆಸಲಾಗುವುದು. ಆದರೆ, ನಾಲ್ಕನೇ ಶನಿವಾರದಂದು ಸರ್ಕಾರಿ ರಜೆ ನೀಡಲು ಸಿಎಂ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
6ನೇ ವೇತನ ಆಯೋಗದ ಶಿಫಾರಸಿನಂತೆ ಜಯಂತಿಗಳನ್ನು ರದ್ದುಗೊಳಿಸುವ ಬಗ್ಗೆ ಪರಿಶೀಲನೆಗೆ ರಚಿಸಲಾಗಿದ್ದ ಕೃಷ್ಣಭೈರೇಗೌಡ ನೇತೃತ್ವದ ಸಂಪುಟ ಉಪಸಮಿತಿ ಜಯಂತಿಗಳ ರಜೆ ಕಡಿತಗೊಳಿಸಿ 4ನೇ ಶನಿವಾರ ರಜೆ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ ಈ ವರದಿ ಅನ್ವಯ ಜಯಂತಿಗಳಿಗೆ ರಜೆ ಕಡಿತಗೊಳಿಸಿದರೆ, ಲಿಂಗಾಯತ, ಕುರುಬ, ವಾಲ್ಮೀಕಿ ಸೇರಿದಂತೆ ಅನೇಕ ಸಮುದಾಯಗಳು ಅಸಮಾಧಾನಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಪುಟ ಸಭೆಯಲ್ಲಿ ಪರ ವಿರೋಧ ಚರ್ಚೆಯಾಗಿದ್ದು, ಅಂತಿಮವಾಗಿ ಈ ರಜೆ ಕಡಿತ ನಿರ್ಧಾರದಿಂದ ಸದ್ಯದ ಮಟ್ಟಿಗೆ ಹಿಂದೆ ಸರಿಯಲಾಗಿದೆ.