ಸುದ್ದಿ

ಆನಂದ್ ಸಿಂಗ್ ಬೆನ್ನಲ್ಲೇ 10 ಮಂದಿ ಶಾಸಕರು ರಾಜೀನಾಮೆ?– ದೋಸ್ತಿ ಸರ್ಕಾರಕ್ಕೆ ಆಷಾಢ ಕಂಟಕ…..!

By admin

July 01, 2019

ಸಿಎಂ ಅಮೆರಿಕ ಪ್ರವಾಸಕ್ಕೆ ತೆರಳಿದ್ದು ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಆಷಾಢದ ಮೊದಲ ದಿನವೇ ದೋಸ್ತಿ ಸರ್ಕಾರಕ್ಕೆ ಕಂಟಕ ಎದುರಾದಂತೆ ಕಾಣುತ್ತಿದೆ. ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಒಟ್ಟು 10 ಶಾಸಕರು ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಜಿಂದಾಲ್‍ಗೆ ಭೂಮಿ ನೀಡಿದ್ದನ್ನು ನೆಪವಾಗಿಟ್ಟುಕೊಂಡು ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಾಂಗ್ರೆಸ್ ಸಂಖ್ಯಾಬಲ 78ಕ್ಕೆ ಕುಸಿದಿದೆ. ಇತ್ತ ಮೂರು ದಿನಗಳಿಂದ ರಮೇಶ್ ಜಾರಕಿಹೊಳಿಯವರು ಎಲ್ಲೂ ಕಾಣಿಸುತ್ತಿಲ್ಲ. ಗೋಕಾಕ್ ನಲ್ಲೂ ಇಲ್ಲ. ಬೆಂಗಳೂರಿನಲ್ಲೂ ಇಲ್ಲ. ಈ ಮೂಲಕ ಆಪರೇಷನ್ ಕಮಲಕ್ಕೆ ಮುಹೂರ್ತ ಫಿಕ್ಸ್ ಮಾಡಿ ಗೌಪ್ಯ ಜಾಗಕ್ಕೆ ಹೋದ್ರಾ ಎಂಬ ಪ್ರಶ್ನೆ ಎದ್ದಿದೆ.

ಯಾರ್ಯಾರು ರಾಜೀನಾಮೆ?:

ಗಣೇಶ್, ಕಂಪ್ಲಿ ಶಾಸಕ ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ ಮಹೇಶ್ ಕುಮಟಳ್ಳಿ, ಅಥಣಿ ಶಾಸಕ ಬಿಸಿ ಪಾಟೀಲ್, ಹಿರೆಕೇರೂರು ಶಾಸಕ ಶ್ರೀಮಂತ್ ಪಾಟೀಲ್, ಕಾಗವಾಡ ಶಾಸಕ ನಾರಾಯಣಗೌಡ, ಕೆಆರ್ ಪೇಟೆ ಶಾಸಕ ಮಹಾದೇವ್, ಪಿರಿಯಾಪಟ್ಟಣ ಶಾಸಕ ಪ್ರತಾಪ್ ಗೌಡ ಪಾಟೀಲ್, ಮಸ್ಕಿ ಶಾಸಕ ಬಸವರಾಜ್ ದದ್ದಲ್- ರಾಯಚೂರು ಗ್ರಾಮೀಣ

ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಆನಂದ್ ಸಿಂಗ್ ರಾಜಿನಾಮೆ ಕೊಟ್ಟ ಮಾತ್ರಕ್ಕೆ ಸರ್ಕಾರ ಬೀಳಲ್ಲ. ಆನಂದ್ ಸಿಂಗ್ ಜಿಂದಾಲ್ ವಿಚಾರಕ್ಕೆ ಅಸಮಧಾನಗೊಂಡಿದ್ದರು. ಜಿಂದಾಲ್ ವಿಚಾರಕ್ಕೆ ಅವರು ರಾಜಿನಾಮೆ ಕೊಟ್ಟಿರಬಹುದು. ಅವರ ಜೊತೆ ಬೇರೆ ಯಾವ ಶಾಸಕರೂ ಇಲ್ಲ. ಇದ್ದಿದ್ದರೆ ಉಳಿದವರು ರಾಜೀನಾಮೆ ಕೊಡುತ್ತಿದ್ದರು ಎಂದು ಹೇಳಿದ್ದಾರೆ.

ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ. ಬೇರೆ ಯಾವ ಶಾಸಕರೂ ರಾಜೀನಾಮೆ ಕೊಡಲ್ಲ. ಅದು ಕೇವಲ ಊಹಾಪೋಹ. ಸರ್ಕಾರ ಬೀಳಿಸುವ ಉದ್ದೇಶದಿಂದ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿಲ್ಲ ಎಂದು ನಾಡಗೌಡ ಸ್ಪಷ್ಟಪಡಿಸಿದ್ದಾರೆ.