ಬಿಜೆಪಿಯ ಕಮಲದ ಆಪರೇಶನ್ ಭೀತಿಯ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡಿದ್ದಾರೆ. ಈತ್ತಿಚೆಗಷ್ಟೇ ತಮ್ಮ ಕೊನೆಯ ಬಜೆಟ್ ಮಂಡಿಸಿದ್ದ ಕೇಂದ್ರಸರ್ಕಾರ ಸಣ್ಣ ರೈತರಿಗೆ ಮೂರೂ ಕಂತಿನಂತೆ ವರ್ಷಕ್ಕೆ ಆರು ಸಾವಿರ ಕೊಡುವುದಾಗಿ ಬಜೆಟ್ ನಲ್ಲಿ ಹೇಳಿತ್ತು.
ಈಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಮಂಡಿಸಿರುವ ಬಜೆಟ್ ನಲ್ಲಿ ಸಿರಿ ಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲು ‘ಸಿರಿ ಯೋಜನೆ’ಯನ್ನು ಘೋಷಿಸಿದ್ದಾರೆ.
ಈ ಯೋಜನೆಯನ್ವಯ ಸಿರಿಧಾನ್ಯ ಬೆಳೆಯುವ ರೈತರಿಗೆ, ಪ್ರತಿ ಹೆಕ್ಟೇರಿಗೆ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.
ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗೆ 150 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ಘೋಷಿಸಿದ್ದು, ಧಾರವಾಡದಲ್ಲಿ ಮಾವು ಹಾಗೂ ಕೋಲಾರದಲ್ಲಿ ಟೊಮೇಟೊ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.