ಸಂಚಾರಿ ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನ ಅಂಬ್ಯುಲೆನ್ಸ್ ಸಿಬ್ಬಂದಿ ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ.
ಹಾವೇರಿ ನಗರದ ನಿವಾಸಿ ಲಕ್ಷ್ಮಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮಕ್ಕಳಲ್ಲಿ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆಯಂತೆ ಆದಷ್ಟು ಬೇಗ ನವಜಾತ ಶಿಶುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರ್ಥಮಾಡಿಕೊಂಡ ಅಂಬ್ಯುಲೆನ್ಸ್ ಸಿಬ್ಬಂದಿ ಕೇವಲ 42 ನಿಮಿಷಗಳಲ್ಲಿ 80 ಕಿಮೀ ಕ್ರಮಿಸಿ ಮಕ್ಕಳನ್ನು ಕಿಮ್ಸ್ ಗೆ ದಾಖಲಿಸಿದ್ದಾರೆ.
ಹುಬ್ಬಳ್ಳಿಯ ಹೊರವಲಯಕ್ಕೆ ಅಂಬ್ಯುಲೆನ್ಸ್ ಬರುತ್ತಿದ್ದಂತೆ ಹುಬ್ಬಳ್ಳಿ ಸಂಚಾರಿ ಪೊಲೀಸರು ಅಂಬ್ಯುಲೆನ್ಸಗೆ ಯಾವುದೇ ಟ್ರಾಫಿಕ್ ಸಮಸ್ಯೆ ಬರದಂತೆ ಕಿಮ್ಸ್ ವರೆಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಟ್ರಾಫಿಕ್ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಅಂಬ್ಯುಲೆನ್ಸ್ ಸಿಬ್ಬಂದಿ ತೌಫಿಕ್ ಪಠಾಣ್ ಮತ್ತು ಕುಮಾರ್ ಹಾಗೂ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.