ಹಾಸನಾಂಬೆಯ ದೇವಾಲಯ ಬಾಗಿಲು ಬುಧವಾರ ಮುಚ್ಚಲಾಗಿದ್ದು, 13 ದಿನಗಳ ದರ್ಶನ ನಂತರ ನಿನ್ನೆ ಮಧ್ಯಾಹ್ನ 1.20 ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗಿದೆ. ಇಂದು ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ಹಾಸನಾಂಬೆಗೆ ಭಕ್ತರಿಂದ ವಿಶಿಷ್ಟ ಮನವಿ ಪತ್ರಗಳು ಬಂದಿದ್ದು, ಹಲವು ಬೇಡಿಕೆಗಳನ್ನು ಭಕ್ತರು ಪತ್ರದಲ್ಲಿ ನಮೂದಿಸಿದ್ದಾರೆ, ಹಳೇ ನೋಟುಗಳು ಸಿಕ್ಕಿದೆ.
ಅದರಲ್ಲೂ ಬ್ಯಾನ್ ಆಗಿರುವ ಹಳೆಯ ಸಾವಿರ ರೂಪಾಯಿ ಮುಖಬೆಲೆಯುಳ್ಳ ನೋಟುಗಳು ಜಾಸ್ತಿ ಪತ್ತೆಯಾಗಿದೆ. ಅಲ್ಲದೇ, ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಬರೆದು ವೆರೈಟಿ ವೆರೈಟಿ ಪತ್ರಗಳು, ಲವ್ ಲೆಟರ್ ಸಿಕ್ಕಿದೆ. ಎಸ್. ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಬರುವಂತೆ ವಿದ್ಯಾರ್ಥಿ ಹಾಸನಾಂಬೆಗೆ ಕೋರಿ ಪತ್ರ ಬರೆದಿದ್ದಾನೆ. ಜೈಲಿನಲ್ಲಿರುವ ತನ್ನ ಪ್ರಿಯಕರ ಬೇಗ ರಿಲೀಸ್ ಆಗಿ ಬಂದು ತನ್ನನ್ನು ಮದುವೆಯಾಗಲಿ ಎಂದು ಕೋರಿ ಯುವತಿಯೊಬ್ಬಳು ಲೆಟರ್ ಬರೆದಿದ್ದಾಳೆ.
ಭೂ ಮಾಫಿಯಾ ದಾಖಲೆ ತಿದ್ದುಪಡಿಯ ಬಗ್ಗೆ ರಾಜಕಾರಣಿಗಳ ಹೆಸರು ಬರೆದು ಅವರಿಗೆ ಬುದ್ದಿ ಕಲಿಸುವಂತೆ ಕೋರಿಕೊಂಡಿರುವ ಲೆಟರ್ ಕೊಡ ಪತ್ತೆಯಾಗಿದೆ. ಅಲ್ಲದೇ, ಮದುವೆ, ಭೂಮಾಫೀಯದ ಬಗ್ಗೆ ಬರೆದಿರುವ ಲೆಟರ್‌ಗಳು ಪತ್ತೆಯಾಗಿದೆ. ತೇಜಸ್ವಿನಿ ಎಂಬ ವಿದ್ಯಾರ್ಥಿನಿಯೊಬ್ಬಳು ತನ್ನನ್ನು ಸೆಲೆಬ್ರಿಟಿ ಮಾಡು ಎಂದು ಕೇಳಿಕೊಂಡಿದ್ದಾರೆ. ಮಹಿಳೆಯೊಬ್ಬರು ಮಗಳಿಗೆ ಮೆಡಿಕಲ್ ಸೀಟ್ ಕೊಡಿಸಿ ಕಾಪಾಡವ್ವ ಎಂದು ಪತ್ರ ಬರೆದಿದ್ದಾರೆ.
ಎದುರಾಳಿಗಳು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಮಾಡು, ರಾಜು ರೆಡ್ಡಿ ನನ್ನಿಂದ ಪಡೆದಿರುವ 8.50 ಲಕ್ಷ ಹಣ ವಾಪಸ್ ಕೊಡಲು ಹೇಳು ಎಂದು ಹಾಸನಾಂಬೆಗೆ ಭಕ್ತನೊಬ್ಬನ ಪತ್ರ ಬರೆದು ಕೇಳಿಕೊಂಡಿದ್ದಾನೆ. ಇನ್ನೊಬ್ಬ ಮಹಿಳೆ ತನಗೆ ಸೈಟ್ ಸಿಗುವಂತೆ ಮಾಡಿ, ನಾನು ಹೇಳಿದ ಹಾಗೆ ನನ್ನ ಗಂಡ ಕೇಳುವಂತೆ ಮಾಡು ಎಂದು ಪತ್ರ ಬರೆದಿದ್ದಾರೆ. ನಮ್ಮ ಮನವಿ ಆಲಿಸಿ ಹಾರೈಸಿದರೆ 101, 1001 ಈಡುಗಾಯಿ ಒಡೆಯುತ್ತೀವೆಂದು ಭಕ್ತರ ಹರಕೆ ಹೇಳೀಕೊಂಡಿದ್ದಾರೆ.