ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲು ಅ.17ರಿಂದ ತೆರೆಯಲಿದ್ದು, ಭಕ್ತರಿಗೆ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ.
ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದಲೂ ಸಹಸ್ತ್ರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಕಲ್ಪಿಸಲು ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ನಾಗರಾಜ್, ತಹಸೀಲ್ದಾರ್ ಮೇಘನಾ, ಮುಜರಾಯಿ ತಹಸೀಲ್ದಾರ್ ಶಾರದಾಂಬಾ, ನಗರಸಭೆ ಆಯುಕ್ತ ಪರಮೇಶ್ ಮತ್ತಿತರ ಅಧಿಕಾರಿಗಳು ಶುಕ್ರವಾರ ದೇಗುಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿಗಾರರೊಂದಿಗೆ ಡಿಸಿ ಗಿರೀಶ್ ಮಾತನಾಡಿ, ”ವರ್ಷಕ್ಕೆ ಒಮ್ಮೆ ದೀಪಾವಳಿ ಸಂದರ್ಭ ಅಶ್ವಯುಜ ಮಾಸದ ಹುಣ್ಣಿಮೆ ನಂತರ ಬರುವ ಗುರುವಾರದಂದು ಹಾಸನಾಂಬ ದೇವಿ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಏನೆಲ್ಲ ವ್ಯವಸ್ಥೆ ಕಲ್ಪಿಸಬೇಕು ಎಂಬ ಕುರಿತು ಶೀಘ್ರವೇ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ. ಬಳಿಕ ಜನಪ್ರತಿನಿಧಿಗಳ ಸಲಹೆ ಪಡೆದು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು,”ಎಂದು ತಿಳಿಸಿದರು.
ಈ ಬಾರಿ ಭಕ್ತರಿಗೆ ಹಾಸನಾಂಬ ದೇವಾಲಯದ ಜಾತ್ರೆಯ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ನೀಡಲು ವೆಬ್‌ಸೈಟ್ ಆರಂಭಿಸಲಾಗಿದೆ. 13 ದಿನಗಳ ದರ್ಶನದ ವೇಳಾಪಟ್ಟಿ, ಪ್ರಸಾದ ವ್ಯವಸ್ಥೆ ಮುಂತಾದ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆ ನಂತರ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಈ ಎರಡು ದಿನ ಹೊರತುಪಡಿಸಿ ಉಳಿದ ದಿನ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಅವಕಾಶವಿದೆ.