ಈಗಂತೂ ರಾಜಕಾರಣಿಗಳು ತಾವು ಗೆಲ್ಲುವುದಕ್ಕಾಗಿ ಏನು ಬೇಕೋ ಮಾಡುತ್ತಾರೆ, ಹೇಗೆಂದರೆ ಹಾಗೆ ಮಾತನಾಡುತ್ತಾರೆ ಕೂಡ. ಕೊನೆಗೂ ರಾಜಕೀಯಕ್ಕೆ ದೇವರನ್ನು ಎಳೆದು ತಂದು ದೇವರಿಗೂ ಜಾತಿಯ ಪಟ್ಟಿಯನ್ನು ಕಟ್ಟಿಬಿಟ್ಟಿದ್ದಾರೆ.
ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ.
ಆದಿತ್ಯನಾಥ್ ಅವರ ಹೇಳಿಕೆಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದ್ದು, ಯೋಗಿ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಈಗ ಪಕ್ಷ ತೊರೆದಿದ್ದಾರೆ.
ಇದೆಲ್ಲದರ ಮಧ್ಯೆ ಶಿವಪಾಲ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ(ಲೋಹಿಯಾ) ವತಿಯಿಂದ ವಾರಣಾಸಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಹನುಮಂತ ದಲಿತ ಜಾತಿಗೆ ಸೇರಿದವನು ಎಂದು ಪ್ರಮಾಣೀಕರಿಸುವ ಜಾತಿ ಸರ್ಟಿಫಿಕೇಟ್ ನೀಡಬೇಕೆಂದು ಕೋರಿದೆ.
ಹನುಮಂತ ದಲಿತ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇವರನ್ನು ಜಾತಿ ರಾಜಕಾರಣಕ್ಕೆ ಎಳೆದು ತಂದಿದ್ದಾರೆ. ಹೀಗಾಗಿ ನಾವು ಹನುಮಂತನ ಜಾತಿ ಸರ್ಟಿಫಿಕೇಟ್ ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿರುವ ಪಕ್ಷದ ಮುಖಂಡ ಹರೀಶ್, ವಾರದೊಳಗೆ ಈ ಪ್ರಮಾಣ ಪತ್ರ ನೀಡದಿದ್ದರೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.