ರಾಜಕೀಯ

ನ್ಯಾಯ ಸಿಗದೇ ಆತ್ಮಹತ್ಯಗೆ ಪ್ರಯತ್ನಿಸಿ ಆಸ್ಪತ್ರೆ ಸೇರಿದ ಶಾಸಕ..!

By admin

January 07, 2019

ಮಾಜಿ ಸಚಿವ ಹಾಗೂ ಹೊಸದುರ್ಗ ಹಾಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮರಳು ಸಾಗಿಸಲು ಪರ್ಮಿಟ್ ಪಡೆದರು ಪೊಲೀಸರು ಅನಗತ್ಯವಾಗಿ ತಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಹೊಸದುರ್ಗ ಪೊಲೀಸ್ ಠಾಣೆ ಮುಂದೆ ಗೂಳಿಹಟ್ಟಿ ಶೇಖರ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು.

ತಮ್ಮನ್ನು ಭೇಟಿ ಮಾಡಲು ಬಂದಿದ್ದ ಶಿವಮೊಗ್ಗ  ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಜೊತೆ ಮಾತನಾಡಿದ ಗೂಳಿಹಟ್ಟಿ ಶೇಖರ್, ತಮ್ಮ ಕ್ಷೇತ್ರದಲ್ಲಿ ಆದ ಘಟನೆಯನ್ನು ವಿವರಿಸಿದರು.

ತಮ್ಮ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಪ್ರತಿದಿನ ಸುಮಾರು 200 ಲೋಡ್ ಮರಳು ದೂರದ ಊರಿಗೆ ಅಕ್ರಮ ಸಾಗಾಣೆಯಾಗುತ್ತಿದೆ. ಒಂದು ಟ್ರಾಕ್ಟರ್ ಲೋಡ್ಗೆ 25 ಸಾವಿರದಂತೆ ಪೊಲೀಸರು ವಸೂಲಿ ಮಾಡುತ್ತಿದ್ದಾರೆ. ಅನೇಕ ಲಾರಿ ಮತ್ತು ಟ್ರಾಕ್ಟರ್ ಗಳನ್ನು ನಾನೇ ಖುದ್ದಾಗಿ ಹಿಡಿದಿದ್ದೇನೆ ಆದರೂ ಈ ದಂಧೆ ಮುಂದುವರೆಯುತ್ತಿದೆ ಎಂದರು.

ಬಡವರಿಗೆ ಮರಳೇ ಸಿಕ್ಕುತ್ತಿಲ್ಲ. ಸರ್ಕಾರದ ಕೆಲಸಕ್ಕೂ ಮರಳು ಇಲ್ಲ, ದೇವಸ್ಥಾನ ಕಟ್ಟಲು ಮರಳು ಸಿಗುತ್ತಿಲ್ಲ. ಸ್ಥಳೀಯರು ಇದರಿಂದ ಕೆಲಸ ಕಳೆದುಕೊಂಡು ಗುಳೇ ಹೋಗುತ್ತಿದ್ದಾರೆ. ಹೋಗಲಿ ಸಣ್ಣ ಹಳ್ಳ ಅಥವಾ ಮನೆ ಬಾಗಿಲಿನಿಂದ ಹರಿದ ನೀರಿನಿಂದ ಉಂಟಾದ ಮರಳನ್ನು ಕೂಡ ಬಡವರು ತೆಗೆದುಕೊಳ್ಳಲು ಈ ಅಧಿಕಾರಿಗಳು ಬಿಡುತ್ತಿಲ್ಲ.

ಸುಳ್ಳು ಕೇಸುಗಳನ್ನು ಬಡವರ ಮೇಲೆ ಅನ್ಯಾಯವಾಗಿ ಹಾಕಲಾಗುತ್ತಿದೆ. ಆದರೆ ಉಳ್ಳವರು ಮಾತ್ರ ತಮಗೆ ಬೇಕಾದಷ್ಟು ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದು ತಮಗೆ ನೋವುಂಟು ಮಾಡಿದೆ ಎಂದು ಗೂಳಿಹಟ್ಟಿ ಶೇಖರ್ ಈಶ್ವರಪ್ಪನವರ ಹತ್ತಿರ ಹೇಳಿಕೊಂಡರು.

ಇದರಿಂದ ಬೇಸತ್ತ ತಾವು ತಮ್ಮ ಬೆಂಬಲಿಗರಿಗಾದ ಅನ್ಯಾಯ ಖಂಡಿಸಿ ಬಡವರಿಗೆ ಮರಳು ಸಿಗದಿರುವುದನ್ನು ವಿರೋಧಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದೆ ಅಷ್ಟೆ. ಮರಳನ್ನು ಕೂಡ ನೀಡದ ಈ ಸರ್ಕಾರಕ್ಕೆ ಏನು ಹೇಳಬೇಕೋ ತಮಗೆ ಗೊತ್ತಿಲ್ಲ. ಇದುವರೆಗೂ ಸುಮಾರು 500ಕ್ಕೂ ಹೆಚ್ಚು ಬಡವರನ್ನು ಜೈಲಿಗೆ ಕಳಿಸಲಾಗಿದೆ. ಹೀಗೆ ಸುಳ್ಳು ಸುಳ್ಳು ಕೇಸು ಹಾಕುವುದನ್ನು ಅಧಿಕಾರಿಗಳು ನಿಲ್ಲಿಸಬೇಕು ಎಂದರು.

ಅಕ್ರಮವಾಗಿ ಮರಳು ಸಾಗಾಣೆ ಮಾಡುವವರನ್ನು ಬಿಟ್ಟು ಪರ್ಮಿಟ್ ಇದ್ದವರ ವಿರುದ್ದವೇ ಕೇಸು ದಾಖಲಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಉದ್ದಟತನದ ಮಾತನಾಡುತ್ತಾರೆ ಎಂದರು.