ಸುದ್ದಿ

ಜನರ ಆರೋಗ್ಯ ರಕ್ಷಣೆ, ಪ್ರವಾಸೋದ್ಯಮಕ್ಕೆ ಒತ್ತು ಮತ್ತು ಕೆಫೀನ್​ ಪೇಯಗಳ ತೆರಿಗೆ ಹೆಚ್ಚಿಸಿದಂತಹ ಜಿಎಸ್​ಟಿ ಮಂಡಳಿ,.!

By admin

September 23, 2019

ಪಣಜಿ,  ದೇಶದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಜಿಎಸ್​ಟಿ ಮಂಡಳಿ ಕೆಫೀನ್​ ಆಧಾರಿತ ಪೇಯಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಹೋಟೆಲ್​ ಕೋಣೆಗಳ ಬಾಡಿಗೆ ಮೇಲಿನ ತೆರಿಗೆಯನ್ನು ಇಳಿಸಿದೆ.

ಜಿಎಸ್​ಟಿ ಮಂಡಳಿ ಸಭೆಯ ಬಳಿಕ ಶುಕ್ರವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಒಂದು ರಾತ್ರಿ ತಂಗಲು 1 ಸಾವಿರ ರೂ.ವರೆಗಿನ ಹೋಟೆಲ್​ ಕೋಣೆಗಳ ಬಾಡಿಗೆ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಒಂದು ರಾತ್ರಿಗೆ 1,001 ರೂ.ನಿಂದ 7,500 ರೂ.ವರೆಗೆ ವಿಧಿಸಲಾಗುವ ಬಾಡಿಗೆ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.12ಕ್ಕೆ, 7,500 ರೂ.ಗೂ ಹೆಚ್ಚು ಬಾಡಿಗೆ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ ಎಂದರು.

ಹೊರಾವರಣದ ಕ್ಯಾಟರಿಂಗ್​ ಮೇಲೆ ವಿಧಿಸಲಾಗುತ್ತಿದ್ದ ಇನ್​ಪುಟ್​ ಟ್ಯಾಕ್ಸ್ ಕ್ರೆಡಿಟ್​ ಅನ್ನು ಶೇ.18ರಿಂದ ಶೇ.5ಕ್ಕೆ, ನೌಕಾ ಇಂಧನದ ಮೇಲಿನ ಜಿಎಸ್​ಟಿಯನ್ನು ಶೇ.5ಕ್ಕೆ ಇಳಿಸಲಾಗಿದ್ದು, ಸರಕು ಸಾಗಣೆ ರೈಲಿನ ವ್ಯಾಗನ್​ಗಳು, ಬೋಗಿಗಳ ಮೇಲಿನ ಜಿಎಸ್​ಟಿಯನ್ನು ಶೇ.5ರಿಂದ ಶೇ.12ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ಉತ್ಪಾದಿಸಲಾಗದ, ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ರಕ್ಷಣಾ ಉಪಕರಣಗಳ ಮೇಲಿನ ಜಿಎಸ್​ಟಿಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಹೆಣೆದ/ಹೆಣೆಯದ ಪಾಲಿಥೀನ್​ ಬ್ಯಾಗ್​ಗಳ ಮೇಲೆ ಏಕಪ್ರಕಾರವಾಗಿ ಶೇ.12ರ ಜಿಎಸ್​ಟಿ ವಿಧಿಸಲಾಗುವುದು. 10-13 ಜನರು ಪ್ರಯಾಣಿಸಬಹುದಾದ ಪೆಟ್ರೋಲ್​ ವಾಹನಗಳ ಮೇಲಿನ ವಿಧಿಸಲಾಗುತ್ತಿದ್ದ ಶೇ.28 ತೆರಿಗೆಯನ್ನು ಶೇ.1ರಷ್ಟು ಹಾಗೂ ಡೀಸೆಲ್​ ವಾಹನಗಳ ಮೇಲಿನ ಶೇ.28 ತೆರಿಗೆಯನ್ನು ಶೇ.3ರಷ್ಟು ಇಳಿಸಲಾಗಿದೆ ಎಂದು ಮಾಹಿತಿ ಒದಗಿಸಿದರು. (ಏಜೆನ್ಸೀಸ್​)