ನಿಮಗೆ ಯಾವುದಾದರೂ ಕಾಯಿಲೆ ಬಗ್ಗೆ ಮಾಹಿತಿ ಬೇಕಾ? ಯಾವುದಾದರೂ ಸ್ಥಳದ ವಿಶೇಷತೆ ಹುಡುಕಬೇಕಾ? ವಿಶೇಷ ವ್ಯಕ್ತಿಯ ಬಗ್ಗೆ ಮಾಹಿತಿ ಬೇಕಾ? ಹೀಗೆ ನಿಮ್ಮ ಯಾವುದೇ ಅಗತ್ಯಕ್ಕೆ ತಕ್ಷಣ ಉತ್ತರ ಒದಗಿಸಬಲ್ಲ ಬೆರಳಂಚಿನ ಮಾಂತ್ರಿಕ ಗೂಗಲ್ ಸರ್ಚ್ ಇಂಜಿನ್. ಬಹುಷಃ ಗೂಗಲ್ ಬರೋದಿಕ್ಕೆ ಮೊದಲು ನಮ್ಮ ಪಾಡು ಹೇಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಾಗದಷ್ಟು ದಟ್ಟವಾಗಿ ಗೂಗಲ್ ನಮ್ಮನ್ನು ಆವರಿಸಿದೆ. ಇಂತಹ ಗೂಗಲ್ ಸರ್ಚ್ ಇಂಜಿನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.ಅದಕ್ಕೆ ಗೂಗಲ್ ವಿನೂತನ ಡೂಡಲ್ ಮೂಲಕ ಗೌರವ ಸಮರ್ಪಿಸಿದೆ.
ಹೌದು ಇಡಿ ಜಗತ್ತನ್ನು ತನ್ನ ಮಾಯೆಯೊಳಗೆ ಸೆಳೆದ ಗೂಗಲ್ ಸರ್ಚ್ ಇಂಜಿನ್ ಗೆ ಇಂದು 21 ನೇ ಜನ್ಮದಿನ. 1998 ಸಪ್ಟೆಂಬರ್ ನಲ್ಲಿ ಸ್ಟ್ಯಾಂಡ್ ಪೋರ್ಡ್ ವಿಶ್ವವಿದ್ಯಾಲಯದಲ್ಲಿ ಗೂಗಲ್ ಕಾರ್ಯಾರಂಭ ಮಾಡಿತ್ತು. ಸಪ್ಟೆಂಬರ್ ೭ ರಂದು ರಜಿಸ್ಟರ್ ಆಗಿದ್ದರೂ ಕಾರ್ಯಾರಂಭ ಮಾಡಿದ್ದು ಸಪ್ಟೆಂಬರ್ 27 ರಂದು. ಹೀಗಾಗಿ ಇಂದಿಗೆ ಗೂಗಲ್ ಪ್ರಪಂಚಕ್ಕೆ ಪರಿಚಯವಾಗಿ ಬರೋಬ್ಬರಿ 21 ವರ್ಷಗಳು ಕಳೆದಿವೆ.
ಸ್ಟ್ಯಾಂಡ್ ಪೋರ್ಡ್ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬಿನ್ ಇದರ ಜನಕರು.ಲ್ಯಾರಿ ಪೇಜ್ ಮತ್ತು ಸೆರ್ಗೆ ಬಿನ್ ಇದನ್ನು ಗೂಗಲ್ ಎಂದು ಹೆಸರಿಟ್ಟರು. ಗೂಗೊಲ್ (google) ಅನ್ನೋದು ಇದರ ಮೂಲ ಪದ.
ಗೂಗಲ್ ಗೂ ಮುನ್ನ ಜನರು ಯಾಹೂ,ಆಸ್ಕ್ ಜೀವ್ಸ್ ಮತ್ತು ಬಿಂಗ್ ಸರ್ಚ್ ಇಂಜೀನ್ ಅವಲಂಬಿಸಿದ್ದರು.ಗೂಗಲ್ ಕಾರ್ಯಾರಂಭ ಮಾಡುತ್ತಿದ್ದಂತೆ ಈ ಸರ್ಚ್ ಇಂಜಿನ್ ಗಳಿಗೆ ಸ್ಪರ್ಧೆಯೊಡ್ಡಿತ್ತು. ಈಗ ಗೂಗಲ್ ವಿಶ್ವದ ಮುಂಚೂಣಿ ಸರ್ಚ್ ಇಂಜೀನ್ ಆಗಿದ್ದು ಅಂದಾಜು 100 ಭಾಷೆಗಳಲ್ಲಿ ಇದು ಕೆಲಸ ನಿರ್ವಹಿಸುತ್ತಿದೆ.