ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವೇಲ್ಸ್ನ ಬಾರ್ಗೋಡ್ ನಿವಾಸಿಯಾಗಿರುವ ಲಿಂಡಾ ಮುಂಕ್ಲೆ(65) ವೇಲ್ಸ್ ಆನ್ಲೈನ್ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ ವಿಚಿತ್ರವಾಗಿ ವರ್ತಿಸುವುದನ್ನು ನೋಡಿ ವೈದ್ಯಕೀಯ ತಪಾಸಣೆ ಮಾಡಿಸಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಲಿಂಡಾ ಹೇಳಿದ್ದಾರೆ.
ಒಂದು ದಿನ ನಾನು ಸೋಫಾ ಮೇಲೆ ಸುಮ್ಮನೇ ಕುಳಿತಿದ್ದೆ. ಬಿಯಾ ನನ್ನ ಮೇಲೆ ಜಿಗಿದು ನನ್ನ ಎದೆ ಭಾಗವನ್ನು ಗುದ್ದು, ಮೂಗಿನಿಂದ ವಾಸನೆಯನ್ನು ಗ್ರಹಿಸುತ್ತಾ ವಿಚಿತ್ರವಾಗಿ ವರ್ತಿಸುತ್ತಿತ್ತು. ಇದಕ್ಕೂ ಮುಂಚೆ ಒಮ್ಮೆಯೂ ಈ ರೀತಿ ಮಾಡಿರಲಿಲ್ಲ. ಇದು ಬಹಳ ವಿಚಿತ್ರ ಎನಿಸಿತು. ಆ ಸಮಯದಲ್ಲಿ ಯೋಚಿಸದೇ ನಾನು ಸುಮ್ಮನಾದೆ ಎಂದು ತಿಳಿಸಿದ್ದಾರೆ.
ಸುಮಾರು ಎರಡು ತಿಂಗಳವರೆಗೂ ಇದೇ ರೀತಿ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿತ್ತು. ಇದರಿಂದ ಎದೆಯ ಒಂದು ಭಾಗದಲ್ಲಿ ಊತದ ಅನುಭವವಾಯಿತು. ಇದರಿಂದ ಎಚ್ಚೆತ್ತು ತಕ್ಷಣ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿದೆ. ವೈದ್ಯರು ವಿಶ್ಲೇಷಿಸಿದ ಬಳಿಕ ಮ್ಯಾಮ್ಮೊಗ್ರಾಮ್(ಸ್ತನ ಕ್ಯಾನ್ಸರ್ ಆರಂಭಿಕ ಹಂತ) ಎಂದು ಖಚಿತಪಡಿಸಿದರು. ಇದು ವೇಗವಾಗಿ ಬೆಳೆದು ಸ್ತನ ಕ್ಯಾನ್ಸರ್ಗೆ ತಿರುಗುವುದಲ್ಲದೇ, ದುಗ್ಧರಸ ಗ್ರಂಥಿಗಳಿಗೂ ಹರಡುತ್ತಿತ್ತು ಎಂದು ಲಿಂಡಾ ವಿವರಿಸಿದ್ದಾರೆ.
ಪರೀಕ್ಷೆಗೆ ಒಳಗಾದ ಬಳಿಕ ಬಿಯಾ ಶ್ವಾನದಂತೆ ಅದರ ಮರಿ ಎನ್ಯಾ ಕೂಡ ವಿಚಿತ್ರವಾಗಿ ವರ್ತಿಸಲು ಶುರು ಮಾಡಿತು ಎಂದು ಮುಂಕ್ಲೆ ಹೇಳಿದ್ದಾರೆ.
ಸದ್ಯ ಲಿಂಡಾ ಅವರು ಚಿಕಿತ್ಸೆ ಪಡೆದುಕೊಂಡಿದ್ದು, ಕ್ಯಾನ್ಸರ್ನಿಂದ ಗುಣಮುಖರಾಗಿದ್ದಾರೆ. ಮೂರನೇ ಕೆಮೊಥೆರಪಿ ಚಿಕಿತ್ಸೆ ವೇಳೆ ತಮ್ಮ ಶ್ವಾನಗಳು ವಿಚಿತ್ರವಾಗಿ ವರ್ತಿಸುವುದನ್ನು ನಿಲ್ಲಿಸಿದವು. ಈ ಬಗ್ಗೆ ವೈದ್ಯರಿಗೆ ತಿಳಿಸಿದಾಗ ಅವರು ಕೂಡ ಅಚ್ಚರಿಗೊಂಡು, ಧನ್ಯವಾದ ಹೇಳುವಂತೆ ತಿಳಿಸಿದರು. ಆದರೆ, ಶ್ವಾನಗಳಿಗೆ ಪದಗಳಲ್ಲಿ ಹೇಗೆ ಧನ್ಯವಾದ ತಿಳಿಸಬೇಕೆಂದು ಗೊತ್ತಾಗುತ್ತಿಲ್ಲ. ಆದರೆ, ನನ್ನ ಜೀವನವನ್ನು ಅವುಗಳಿಗಾಗಿ ಮುಡುಪಾಗಿಟ್ಟಿರುತ್ತೇನೆ ಎಂದು ಲಿಂಡಾ ಭಾವನಾತ್ಮಕವಾಗಿ ಹೇಳಿದ್ದಾರೆ.