ಸಿನಿಮಾ

ಶೆಟ್ಟರ ಕಥೆಯಲ್ಲಿ, ಬರವಣಿಗೆಯೇ ರಾಜ.. ಗರುಡ ಗಮನ ವೃಷಭ ವಾಹನ ಚಿತ್ರದ ವಿಮರ್ಶೆ

By Raj Rao

November 23, 2021

ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ಶೈಲಿ ಇದ್ದರೂ, ಸಿನಿಮಾ ನಿರ್ದೇಶಕರನ್ನು ಎರಡು ವರ್ಗವಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದ ನಿರ್ದೇಶಕರು ಸಿನಿರಸಿಕರನ್ನು ರಂಜಿಸಲೆಂದೇ ಸಿದ್ದಸೂತ್ರದ ಅಂಶಗಳನ್ನು ಇಟ್ಟುಕೊಂಡು, ಜನ ಬಯಸುವ ಅಂಶಗಳನ್ನೇ ಗ್ರಹಿಸಿ, ಅಳೆದು ತೂಗಿ ಅಂಥದ್ದೇ ಸಿನಿಮಾ ಮೂಲಕ ಜನರನ್ನು ರಂಜಿಸಬಯಸುವವರು. ಹೊಸ ಪ್ರಯೋಗಗಳಿಗೆ ಹಾತೊರೆಯುವ‌ ಮನಸು ಮಾಡದವರು.

ಎರಡನೆಯ ವರ್ಗದ ನಿರ್ದೇಶಕರು ತಮ್ಮೊಳಗಿನ‌ ಕಥೆಯನ್ನು ಚೌಕಟ್ಟಿನ ಹಂಗಿಲ್ಲದೆ, ಸಿದ್ಧ ಸೂತ್ರಗಳಿಗೆ ಮೊರೆ ಹೋಗದೇ, ತಮ್ಮದೇ ರೀತಿಯಲ್ಲಿ, ರೂಪಿಸಿ, ನಿರೂಪಿಸಿ ತೆರೆಗೆ ತರುವವರು. ಸದಾ ಹೊಸ ಪ್ರಯೋಗಗಳಿಗೆ‌ ಮಿಡಿಯುವವರು, ದುಡಿಯುವವರು.

ರಾಜ್ ಬಿ ಶೆಟ್ಟಿ ಎರಡನೇ ವರ್ಗದ ನಿರ್ದೇಶಕ. ಅವರಿಗೆ ಸಿನಿಮಾ ಸೋಲು ಗೆಲುವಿನ ಭಯವಿಲ್ಲ. ತಾವು ಬರೆದ, ತಾವು ನಂಬಿದ ಕಥೆಯನ್ನು ತಮ್ಮ ಮನ ಮುಚ್ಚುವಂತೆ ಮುಂದೆ ಜನ‌ ಮೆಚ್ಚೇ ಮೆಚ್ಚುತ್ತಾರೆ ಎಂಬ ಆಶಯದಲ್ಲಿ ಸಿನಿಮಾ‌ ಮಾಡಿದ್ದಾರೆ. ಮತ್ತು ಆ ನಿಟ್ಟಿನಲ್ಲಿ ಭಾಗಶಃ ಗೆದ್ದಿದ್ದಾರೆ.

ಇಲ್ಲಿ ರಾಜ್ ಒಬ್ಬ ನಿರ್ದೇಶಕನಾಗಿ ಗೆಲ್ಲುವುದರ ಜೊತೆಗೆ ಒಬ್ಬ ಬರಹಗಾರನಾಗಿಯು ಬೆರಗು ಮೂಡಿಸುತ್ತಾರೆ.

ಪ್ರತಿ ಪಾತ್ರಕ್ಕೆ ಅವರು ನೀಡಿರುವ ಸಹಜ ಶೈಲಿಯ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ. ಯಾವೆಲ್ಲ ಕಲಾವಿದರು ಹಾಸ್ಯ ಪಾತ್ರಗಳಿಗೆ ಲಾಯಕ್ಕು ಎಂದು ಭಾವಿಸಲಾಗಿತ್ತೋ ಅವರನ್ನೆಲ್ಲ ಗಂಭೀರ ಪಾತ್ರಗಳಲ್ಲಿ ತೋರಿಸಿ ಗೆಲ್ಲುವ ಮೂಲಕ ಒಬ್ಬ ಕ್ರಿಯಾಶೀಲ ನಿರ್ದೇಶಕ ಯಾವುದೇ ಕಲಾವಿದನ ಇಮೇಜ್ ಬದಲಿಸಬಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ..

ಎಲ್ಲಕ್ಕಿಂತ ಹೆಚ್ಚಾಗಿ ‘ಒಂದು ಮೊಟ್ಟೆಯ ಕಥೆ’ಯಲ್ಲಿ ಕೀಳರಿಮೆ ಹೊಂದಿದ್ದು, ಮಾತನಾಡಲು ಅಂಜುವ ಹಾಸ್ಯಮಯ ಪಾತ್ರಕ್ಕೆ ಜೀವ‌ ತುಂಬಿದ್ದ ರಾಜ್, ಇಲ್ಲಿ ತಮ್ಮ ಇಮೇಜ್ ಅಕ್ಷರಶಃ ಬದಲಾಯಿಸಿದ್ದಾರೆ. ಅವರ ಉಗ್ರರೂಪ ಎಂಥವರನ್ನಾದರೂ ಅರೆಕ್ಷಣ ಬೆಚ್ಚಿ ಬೀಳಿಸುವಂತಿದೆ.

ಸಿನಿಮಾದಲ್ಲಿ ಕ್ರೈಂ ತುಂಬಿದ್ದರೂ, ಅಂಥ ಸನ್ನಿವೇಶಗಳಲ್ಲಿ ರಕ್ತ ಸಿಕ್ತ ದೃಶ್ಯಗಳನ್ನು ಜಾಣ್ಮೆಯಿಂದ ಮರೆಮಾಚಿ, ಧ್ವನಿ, ನೆರಳು, ಕ್ಯಾಮೆರಾ ಮೂಮೆಂಟ್ ಮೂಲಕವೇ ಆ ರೌದ್ರವನ್ನು ನೋಡುಗರಿಗೆ ಫೀಲ್ ಮಾಡಿಸುತ್ತಾರೆ. ಮತ್ತು ಅಂಥ ದೃಶ್ಯವನ್ನು ನೋಡುಗರಿಗೆ ಸಹ್ಯ ಎನಿಸುವಂತೆ ಮಾಡಿದ್ದಾರೆ. ಒಬ್ಬ ನಟನಾಗಿಯು ರಾಜ್ ಬಿ ಶೆಟ್ಟಿ ಪರಕಾಯ ಪ್ರವೇಶ ಮಾಡಿದ್ದಾರೆ. ರಿಷಭ್ ಶೆಟ್ಟಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಆಯ್ಕೆ ಸಮರ್ಥ, ಅಭಿನಯ ಅದ್ಭುತ.

ಕನ್ನಡದಲ್ಲಿ ಕ್ರಿಯಾಶೀಲ ಕಥೆ ಮತ್ತು ನಿರ್ದೇಶಕರನ್ನು ಹುಡುಕುತ್ತಿದ್ದ ಸಿನಿಮಾಪ್ರಿಯರಿಗೆ ರಾಜ್ ಬಿ ಶೆಟ್ಟಿ ಹೊಸ ಆಶಾಕಿರಣ. ಒಂದು ಕಡೆ ಸಿನಿಮಾಸೂತ್ರಗಳನ್ನಿಟ್ಟುಕೊಂಡು ಅದದೇ ಹೀರೋಯಿಸಂ, ಬಿಲ್ಡಪ್, ಕೌಂಟರ್ ಡೈಲಾಗ್ ಆಧಾರಿತ ನಿರ್ದೇಶಕರು ಹೇರಳವಾಗಿರುವಾಗಿ, ಅದೆಲ್ಲದರ ಹೊರತಾಗಿಯು ಸಿನಿಮಾ‌ ಮಾಡಬಲ್ಲೆ, ಮಾಡಿ ಗೆಲ್ಲಬಲ್ಲೆ ಎಂಬ ಮನೋಭಾವದ ವಿರಳ ನಿರ್ದೇಶಕರ ಸಾಲಿನಲ್ಲಿ ರಾಜ್ ನಿಲ್ಲುತ್ತಾರೆ.

ರಾಜ್ ಅವರಿಗೆ ಕಥನ ಹೇಳುವ ಶೈಲಿ ಚೆನ್ನಾಗಿ ಒಲಿದಿದೆ. ಒಂದು ಸಾಮಾನ್ಯ ಕಥೆಯನ್ನು ಹೊಸತನದ‌ ನಿರೂಪಣಾ‌ ಶೈಲಿಯಿಂದ ವಿಶೇಷವಾಗಿ ತೋರಿಸುತ್ತಾರೆ.

‘ಗರುಡ ಗಮನ ವೃಷಭ ವಾಹನ’ ಚಿತ್ರ ಎಲ್ಲರಿಗೂ ‌ಇಷ್ಟವಾಗುತ್ತದಾ ಎಂದು ಕೇಳಿದರೆ ನನ್ನ ಉತ್ತರ ಇಷ್ಟೇ.. ಅದು‌ ನೋಡುಗರ ಅಭಿರುಚಿಯನ್ನು ಅವಲಂಬಿಸಿದೆ. ಕಮರ್ಷಿಯಲ್ ಸೂತ್ರಗಳ ಸಿನಿಮಾ ಪ್ರಿಯರಿಗೆ ಇದು ರುಚಿಸದಿದ್ದರೆ ಅಚ್ಚರಿಯಲ್ಲ. ಯಾವ ಸಿನಿಮಾಗಳು ಲೋಪ ದೋಷಗಳಿಗೆ ಹೊರತಲ್ಲ. ಅಂತೆಯೇ ಇಲ್ಲೂ ದ್ವಿತೀಯಾರ್ಧ ಸ್ವಲ್ಪ ಸುದೀರ್ಘವೆನಿಸುತ್ತದೆ. ಆದರೆ ಎಲ್ಲರ ನಿರೀಕ್ಷೆ ಮೀರಿದ ರೀತಿಯಲ್ಲಿ ಕಥೆ ಸಾಗುವುದರಿಂದ ಅಲ್ಲಲ್ಲಿ ವಾವ್ ಫ್ಯಾಕ್ಟರ್ ಗಳಿದೆ‌. ಮತ್ತದು ಇಷ್ಟವಾಗುತ್ತೆ‌.

ಆದರೆ ರಾಜ್ ಬಿ ಶೆಟ್ಟಿ ಒಂದಷ್ಟು ಅದ್ಭುತ ಸಿನಿಮಾಗಳನ್ನು ಕೊಡಬಲ್ಲ ಕನಸು ಮತ್ತು ಕಸುವನ್ನು ಹೊಂದಿರುವ ನಿರ್ದೇಶಕ ಎಂಬುದು ಸತ್ಯ.

ಅವರ ಸಿನಿಮಾಪ್ರೀತಿಗೆ, ಬರಹಕ್ಕೆ ಎಂಥವರಾದರೂ ಅಭಿಮಾನಿಯಾಗುತ್ತಾರೆ.

ಕ್ಯಾಮೆರಾ ವರ್ಕ್, ಎಡಿಟಿಂಗ್ ಸಕತ್ತಾಗಿ ಬ್ಲೆಂಡ್ ಆಗಿದೆ.

ಮಿಥುನ್ ಮುಕುಂದನ್ ಅವರ ಹಿನ್ನೆಲೆ ಸಂಗೀತ ಬೇರೆಯದೇ ಫೀಲ್ ಕೊಡುತ್ತದೆ, ಕಾಡುತ್ತದೆ, ಆವರಿಸುತ್ತದೆ.

ಇಂಥದ್ದೊಂದು ಕಥೆ ನಂಬಿ ಹಣ ಹೂಡಿದ ನಿರ್ಮಾಪಕರಿಗೂ ಮೆಚ್ಚುಗೆ ಸಲ್ಲಲೇಬೇಕು.

ಮಲಯಾಳಂ, ತಮಿಳಿನ ಪ್ರಯೋಗಾತ್ಮಕ ಚಿತ್ರಗಳನ್ನು ಮೆಚ್ಚಿ ಹೊಗಳುವವರಿಗೆ ಈ ಚಿತ್ರ ಹೆಚ್ಚು ಆಪ್ತ ಎನಿಸುತ್ತದೆ. ಮತ್ತು ನಾವು ಈಗ ಪರಭಾಷಾ ನಿರ್ದೇಶಕರ ಅಭಿಮಾನಿಗಳಿಗೂ ಈ ಚಿತ್ರವನ್ನು ರೆಫರ್ ಮಾಡಬಹುದು. ಆ ಬಳಿಕ ಅವರು ಸಹ ರಾಜ್ ಅವರನ್ನು ಹೊಗಳುವುದನ್ನು ಕಂಡು ಸಂಭ್ರಮಿಸಬಹುದು.

ಒಮ್ಮೆ ನೋಡಿ, ಹೊಸತನಕ್ಕೆ ಬೆಂಬಲ ನೀಡಿ.

Good luck and congratulations for the tremendous success Raj B Shetty

ಧನ್ಯವಾದಗಳೊಂದಿಗೆ

ಟಿ.ಜಿ.ನಂದೀಶ್, ತೀರ್ಥಹಳ್ಳಿ.