ಅಪಾಯಕಾರಿ ಬಂಡೆಗಳನ್ನು ಸುಲಭವಾಗಿ ಏರಿ ರಾಜ್ಯದ ಜನರ ಮನೆಮಾತಾಗಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ಗೆ ಫೆ.27 ಕೊನೆಯ ದಿನವಾಗಲಿದೆಯೆ ? ಸ್ವತಃ ಅವರೇ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.ಬೆಂಗಳೂರು ಹೊರವಲಯದ ನೆಲಮಂಗಲದ ಖಾಸಗಿ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್, ಮುಂದಿನ ವರ್ಷ ಫೆಬ್ರವರಿ 26-27 ನನ್ನ ಕೊನೆಯ ದಿನ ಎಂದು ಹೇಳಿ ಭಾವುಕರಾಗಿದ್ದಾರೆ.ಸರ್ಕಾರದಿಂದ ಚಿತ್ರದುರ್ಗದ ಅಭಿವೃದ್ಧಿಗೆ ಯಾವುದೇ ಪ್ರಯೋಜನವಾಗಿಲ್ಲ.
ಆದ ಕಾರಣ ನಾನು ಮುಂಬರುವ ಫೆ.26 ಮತ್ತು 27 ರಂದು ಜಗತ್ತಿನ ಅತಿ ಎತ್ತರದ ಅಮೆರಿಕದ 3,221 ಅಡಿ ಎತ್ತರದ ಏಂಜಲ್ ಫಾಲ್ಸ್ ಏರುತ್ತಿದ್ದು, ಅದರಲ್ಲಿ ಬರುವ ಹಣವನ್ನು ಕೋಟೆಯ ಅಭಿವೃದ್ಧಿಗೆ ಹಾಗೂ ನನ್ನ ಶಿಷ್ಯರ ಜೀವನಕ್ಕಾಗಿ ಬಳಕೆ ಮಾಡುವುದಾಗಿ ತಿಳಿಸಿದರು.ಅಂದು ನಾನು ಬದುಕುವುದು ಬಹಳ ಕಷ್ಟ. ಒಂದು ವೇಳೆ ನಾನು ಸತ್ತರೆ, ಕನ್ನಡಿಗರೆಲ್ಲಾ ಒಂದು ಹಿಡಿ ಮಣ್ಣು ಹಾಕಿ. ಕನ್ನಡಿಗರ ಪ್ರೀತಿ ಬಿಟ್ಟು ಬೇರೇನು ಸಂಪಾದಿಸಿಲ್ಲ. ಕನ್ನಡ ನಾಡಿಗಾಗಿ ಮಹಾನ್ ಸಾಧನೆ ಮಾಡಲು ಹೊರಟಿರುವೆ.
ನನ್ನನ್ನು ಹರಸಿ ಆಶೀರ್ವದಿಸಿ ಎಂದು ಭಾವುಕರಾಗಿ ಕೋತಿರಾಜ್ ತಮ್ಮ ಮನದಾಳ ಮಾತನ್ನು ಹಂಚಿಕೊಂಡಿದ್ದಾರೆ. ನೆಲಮಂಗಲದ ಖಾಸಗಿ ಶಾಲೆಯ ಪುಟಾಣಿ ಮಕ್ಕಳು ಚಿತ್ರದುರ್ಗದ ಕೋಟೆಯ ಗತವೈಭವವನ್ನು ತೋರುವ ಒನಕೆ ಓಬವ್ವಳ ಕಿಂಡಿ, ಸೆರೆಮನೆ, ಏಳು ಸುತ್ತಿನ ಕೋಟೆ ದೇವಾಲಯಗಳ ತದ್ರೂಪವನ್ನು ನೋಡಿ ಇನ್ನಷ್ಟು ಭಾವುಕರಾಗಿ ಮಕ್ಕಳ ಜೊತೆ ತಮ್ಮ ಅನುಭವವನ್ನು ಜ್ಯೋತಿರಾಜ್ ಹಂಚಿಕೊಂಡರು.