ಸುದ್ದಿ

18.70 ಲಕ್ಷ ರೈತರ 8759 ಕೋಟಿ ಸಾಲ ಮನ್ನಾ…!

By admin

June 12, 2019

ಬೆಂಗಳೂರು: ಸಾಲ ಮನ್ನಾ ಯೋಜನೆಯಲ್ಲಿ ಈವರೆಗೆ ರಾಜ್ಯದ 18.70 ಲಕ್ಷ ರೈತ ಕುಟುಂಬಗಳ 8759 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ಮನ್ನಾ ವರ್ಗೀಕರಣ ಮಾಡುವಾಗ ಯಾದಗಿರಿಯಲ್ಲಿ ಕೆಲಗೊಂದಲ ಮೂಡಿದ್ದು ಈ ಕುರಿತು ಶುಕ್ರವಾರ ಜೂ.14ರಂದು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ.

ಸಾಲ ಮನ್ನಾ ಯೋಜನೆಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು ನಿಗದಿತ ಅವಧಿಯೊಳಗೆ ಸಾಲಮನ್ನಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.ವಾಣಿಜ್ಯ ಬ್ಯಾಂಕ್‌ಗಳಲ್ಲಿ 7.49 ಲಕ್ಷ ರೈತರ 3929 ಕೋಟಿ ರೂ. ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ 11.20 ಲಕ್ಷ ರೈತರ 4830 ಕೋಟಿ ರೂ. ಸೇರಿ ಒಟ್ಟು 18.70 ಲಕ್ಷ ರೈತರ 8759 ಕೋಟಿ ರೂ. ಮನ್ನಾ ಮಾಡಲಾಗಿದೆ. ಈ ಪೈಕಿ ವಾಣಿಜ್ಯ ಬ್ಯಾಂಕಿನಲ್ಲಿ ಪಾವತಿಸಲಾದ 13,123 ರೈತರ ಸಾಲದ ವರ್ಗೀಕರಣ ಮಾಹಿತಿಯನ್ನು ಬ್ಯಾಂಕುಗಳು ತಪ್ಪಾಗಿ ನೀಡಿರುತ್ತವೆ. ರೆಗ್ಯುಲರ್‌ ಲೋನ್‌ ಅನ್ನು ರೀಸ್ಟಕ್ಚರ್‌x ಲೋನ್‌ ಎಂದು ಪರಿಗಣಿಸಿ ರೈತರಿಗೆ ಕೇವಲ 25 ಸಾವಿರಗಳನ್ನು ಮಾತ್ರ ಪ್ರೋತ್ಸಾಹಧನ ರೂಪದಲ್ಲಿ ಪಾವತಿಸಲಾಗಿದೆ.

ಆದರೆ, ರೈತರಿಗೆ ರೀಸ್ಟಕ್ಚರ್‌ ಲೋನ್‌ ಆಧಾರದಲ್ಲಿ 2 ಲಕ್ಷ ರೂ.ಗಳ ಸಾಲ ಮಂಜೂರು ಮಾಡಲು ಅವಕಾಶವಿದೆ. ಅನರ್ಹವಾದ ಸಾಲದ ವಿಧಗಳನ್ನು ರೈತರ ಸಾಲದ ಯೋಜನೆಗೆ ಪರಿಗಣಿಸಿ ತಪ್ಪು ಮಾಹಿತಿ ಸಲ್ಲಿಸಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ, ಈಗಾಗಲೇ ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾಧ್ಯಮದವರ ಮೇಲೆ ಸಿಎಂ ಸಿಡಿಮಿಡಿ: ಮಾಧ್ಯಮದವರ ಮೇಲೆ ಮತ್ತೆ ಬೇಸರ ಹೊರಹಾಕಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ, “ರಾಜ್ಯದ ಅಭಿವೃದ್ಧಿಯಾಗಬೇಕಾ? ಅಥವಾ ಹಾಳಾಗಬೇಕಾ? ನೀವೇ ನಿರ್ಧಾರ ಮಾಡಿ’ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸತ್ಯವನ್ನು ದಿನಾ ತೋರಿಸಿ ಏನು ಸಾಧನೆ ಮಾಡ್ತಾರೋ ಅರ್ಥವಾಗುತ್ತಿಲ್ಲ. ಈ ಸರ್ಕಾರದ ಮೇಲೆ ದಿನನಿತ್ಯ ಮಾಧ್ಯಮಗಳೇ ಮುಗಿಬಿದ್ದಿವೆ ಎಂದು ಹೇಳಿದರು.ಮೋದಿನಾ ದಿನಾ ಹೊಗಳುತ್ತೀರಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಹೋಗಿ ಮೋದಿಯವರಿಗೆ ಹೋಗಿ ಕೇಳಿ. ನಮ್ಮಿಂದ ತಪ್ಪಾಗಿರೋದು ಅಂತ ಬ್ಯಾಂಕ್‌ನವರೇ ಹೇಳಿಕೊಂಡಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಬೇರೆ ರೀತಿಯ ಸುದ್ದಿ ಬಿತ್ತರವಾಗುತ್ತದೆ. ಜನರನ್ನು ದಯವಿಟ್ಟು ತಪ್ಪು ದಾರಿಗೆ ಎಳೆಯಬೇಡಿ, ಅನಗತ್ಯವಾಗಿರೋದು ತೋರಿಸಬೇಡಿ ಎಂದು ಮನವಿ ಮಾಡಿದರು ಜೂ.21ರಂದು ಯಾದಗಿರಿ ಜಿಲ್ಲೆ ಗುರುಮಿಟ್ಕಲ್‌ ತಾಲೂಕಿನಲ್ಲಿ ಹಾಗೂ 22ರಂದು ಕಲಬುರಗಿ ಜಿಲ್ಲೆ ಅಫ‌ಜಲಪುರ ತಾಲೂಕು, ಜುಲೈ 5ರಂದು ಬೀದರ್‌ ಜಿಲ್ಲೆ ಬಸವಕಲ್ಯಾಣ, 6 ರಂದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ.