ಮುಂದಿನ ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೊಳಿಸಿದೆ.
ರೈತರಿಗೆ ಕೃಷಿ ಕಾರ್ಯಗಳಿಗೆ ಯಂತ್ರಗಳನ್ನು ಬಾಡಿಗೆಗೆ ನೀಡಲು ಕೃಷಿ ಸಚಿವಾಲಯ ಸಿ.ಹೆಚ್.ಸಿ. ಫಾರ್ಮ್ ಮೆಷಿನರಿ ಆಪ್ ಪರಿಚಯಿಸಿದೆ. ಇದರ ಮೂಲಕ ರೈತರು ಕೃಷಿ ಉಪಕರಣ ಬಾಡಿಗೆ ಪಡೆಯಬಹುದಾಗಿದೆ.
ಕೃಷಿ ಕೇಂದ್ರಗಳಿಂದ 50 ಕಿಲೋಮೀಟರ್ ದೂರದಲ್ಲಿನ ಪ್ರದೇಶಗಳಿಗೆ ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ. 12 ಭಾಷೆಗಳಲ್ಲಿ ಆಪ್ ಮಾಹಿತಿ ನೀಡಲಿದೆ. ರೈತರು ತಮಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳ ಖರೀದಿಗೆ ಹೆಚ್ಚಿನ ಹಣ ಖರ್ಚು ಮಾಡಬೇಕಿಲ್ಲ.ಯಂತ್ರೋಪಕರಣ ಬಾಡಿಗೆ ಪಡೆದುಕೊಳ್ಳುವುದರಿಂದ ಕಡಿಮೆ ಖರ್ಚಿನಲ್ಲಿ ಕೃಷಿ ಕಾರ್ಯ ನಡೆಸಬಹುದಾಗಿದೆ.
ಸರ್ಕಾರದಿಂದ ದೇಶದಾದ್ಯಂತ 35,000 ಕಸ್ಟಮ್ ಕೇಂದ್ರಗಳನ್ನು ಆರಂಭಿಸಲಾಗಿದೆ. ವಾರ್ಷಿಕ 2.5 ಲಕ್ಷ ಮೌಲ್ಯದ ಕೃಷಿ ಉಪಕರಣ ಬಾಡಿಗೆ ನೀಡುವ ಸಾಮರ್ಥ್ಯವನ್ನು ಈ ಕೇಂದ್ರಗಳು ಹೊಂದಲಿವೆ. ಕೃಷಿ ಸಚಿವಾಲಯ ಸಿ.ಹೆಚ್.ಸಿ. ಫಾರ್ಮ್ ಮೆಷಿನರಿ ಕೇಂದ್ರಗಳಿಂದ ಕೃಷಿಕರು ಯಂತ್ರೋಪಕರಣ ಪಡೆಯಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಪ್ ಲಭ್ಯವಿದ್ದು ಅದರಲ್ಲಿ ಭಾಷೆ ಆಯ್ಕೆ ಮಾಡಿಕೊಂಡಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಲಾಗಿದೆ.