ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ಗೆ ಅಂದಾಜು ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಈ ಸಂಬಂಧ ಭಾರತೀಯ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೇಳಾಪಟ್ಟಿ ಕುರಿತಂತೆ ಸಾಕಷ್ಟು ವದಂತಿಗಳು, ತಪ್ಪು ವೇಳಾಪಟ್ಟಿ ಮಾಹಿತಿ ಹಬ್ಬುತ್ತಿವೆ. ನೆಟ್ಟಿಗರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ವೇಳಾಪಟ್ಟಿ ಫೋಟೊ ಹಂಚುವಾಗ ಸತ್ಯಾಸತ್ಯತೆ ಪರಿಶೀಲಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪರಿಶೀಲನೆಗೆ ಒಂದುಷ್ಟು ಮಾಹಿತಿ, ಸತ್ಯತೆ ಇಲ್ಲಿ ತಿಳಿಯಬಹುದಾಗಿದೆ.
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಈ ಹಿಂದಿನ ಹಳೆಯ ವೇಳಾಪಟ್ಟಿಯ ಫೋಟೊವನ್ನೆ ಎಡಿಟ್ ಮಾಡಲಾಗಿದೆ. ಈ ಫೋಟೊದಲ್ಲಿ 2018 ಇರುವ ಕಡೆ 2023 ಎಂದು (ಎಡಿಟ್) ತಿದ್ದಲಾಗಿದೆ. ಆ ಎಡಿಟ್ ಮಾಡಿದ ಫೋಟೊವನ್ನೇ ಎಲ್ಲೆಡೆ ಶೇರ್ ಮಾಡಲಾಗುತ್ತಿದ್ದು, ಅದನ್ನೆ ಪ್ರಸಕ್ತ ಸಾಲಿನ ವಿಧಾನಸಭೆಯ ಚುನಾವಣೆಯ ವೇಳಾಪಟ್ಟಿ ಎಂದು ನಂಬಿಸಲಾಗುತ್ತಿದೆ.
ನಿಜವೇನೋ ಎಂಬಂತೆ 2018ರ ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿ ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಅದರಲ್ಲಿ ವಿಧಾನಸೌಧದ ಚಿತ್ರ ಸಹಿತ ನೀತಿ ಸಂಹಿತಿ ಜಾರಿ , ಚುನಾವಣಾ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ನಾಮಪತ್ರಗಳ ಪರಿಶೀಲನೆ, ಮತದಾನ, ಮತ ಎಣಿಕೆ ಎಂಬೆಲ್ಲ ಅಂಶಗಳನ್ನು ದಿನಾಂಕ ಸಹಿತ ಸೇರಿಸಲಾಗಿದೆ. ಆದರೆ ಇದು ಐದು ವರ್ಷಗಳ ಹಿಂದಿನ (2018ರ) ಚುನಾವಣೆಯ ವೇಳಾಪಟ್ಟಿ ಎಂಬುದು ಖಚಿತವಾಗಿದೆ. ಹೀಗಿದ್ದರೂ ಇದೇ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕ ವಿಧಾನಸಭೆ 2023ರ ಚುನಾವಣೆ ಬಗ್ಗೆ ಆಯೋಗ ವೇಳಾಪಟ್ಟಿ ಘೋಷಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ಕೆಲವೇ ದಿನಗಳಲ್ಲಿ ನೀಡಲಿದ್ದಾರೆ.