ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳು ಹೆಚ್ಚುತ್ತಿವೆ. ಒಬ್ಬ ವ್ಯಕ್ತಿ ಎರಡು, ಮೂರು ಫೇಸ್ ಬುಕ್ ಖಾತೆ ಓಪನ್ ಮಾಡಿಕೊಂಡಿದ್ದಾರೆ. ನಕಲಿ ಫೇಸ್ಬುಕ್ ಖಾತೆಗಳಿಂದ ಸಾಕಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ತಡೆಯಲು ಫೇಸ್ ಬುಕ್ ಸೇರಿ ಇತರೆ ಸಾಮಾಜಿಕ ಜಾಲತಾಣ ಬಳಕೆದಾರರ ಪ್ರೊಫೈಲ್ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ಮದ್ರಾಸ್, ಬಾಂಬೆ ಹಾಗೂ ಮಧ್ಯ ಪ್ರದೇಶದ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರೋ ಆರ್ಜಿಗಳನ್ನು ಸುಪ್ರೀಂಕೋರ್ಟ್ಗೆ ವರ್ಗಾಯಿಸಲು ಕೋರಿರುವ ಅರ್ಜಿ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ.
ಈ ಕಾನೂನನ್ನು ಜಾರಿಗೆ ತರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದಕರ ಪರ ನಿಲ್ಲುವ ಮತ್ತು ವದಂತಿಗಳನ್ನು ಹಬ್ಬಿಸುವ ಘಟನೆಗಳನ್ನು ತಡೆಯಬಹುದು. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಗೆ ಬಳಕೆದಾರರ ಆಧಾರ್ ಸಂಖ್ಯೆ ನಮೂದಿಸಬೇಕು. ಆಗ ಇಂಥಹ ಕೃತ್ಯ ನಡೆಸುವವರನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಅಲ್ಲದೆ, ಸಾಮಾಜಿಕ ಜಾಲತಾಣದ ಮೂಲಕ ರಾಷ್ಟ್ರವಿರೋಧಿ ಮತ್ತು ಸಮಾಜವಿರೋಧಿ ಚಟುವಟಿಕೆಗಳ ನಡೆಯುವುದಕ್ಕೆ ಕಡಿವಾಣ ಹಾಕಲು ಸಾಧ್ಯ ಎಂಬುದು ಅರ್ಜಿದಾರರ ಅಭಿಪ್ರಾಯವಾಗಿದೆ .
ಸಾಮಾಜಿಕ ಜಾಲತಾಣದ ಖಾತೆಗೆ ಆಧಾರ್ ಲಿಂಕ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಅ.13ರ ಒಳಗೆ ಅಭಿಪ್ರಾಯ ತಿಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಸರ್ಕಾರ, ಗೂಗಲ್, ಟ್ವಿಟ್ಟರ್, ಯೂಟ್ಯೂಬ್ಗೆ ನಿರ್ದೇಶನ ನೀಡಿದೆ.
ದೀಪಕ್ ಗುಪ್ತಾ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠ ಅರ್ಜಿಗಳ ವಿಚಾರಣೆಗೆ ಒಪ್ಪಿಗೆ ಸೂಚಿಸಿದ್ದು. ಈ ವಿಚಾರ ಮದ್ರಾಸ್ ಹೈಕೋರ್ಟ್ನಲ್ಲಿದೆ. ಹೀಗಾಗಿ ನಾವು ವಿಚಾರಣೆ ನಡೆಸುತ್ತೇವೆ. ಆದರೆ ಅಂತಿಮ ತೀರ್ಪನ್ನು ನೀಡುವುದಿಲ್ಲ ಎಂದು ಪೀಠ ನೋಟಿಸ್ ನೀಡಿದೆ.