ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು ಆರಂಭವಾಗಿರುವುದರಿಂದ ಮೇ 20ರೊಳಗೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಮುಗಿಯಲಿದೆ.
ಮೇ 31ರೊಳಗೆ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಲು ಆಯೋಗ ಸಿದ್ದತೆ ಮಾಡಿಕೊಂಡಿದೆ. ಜೂನ್ 1ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗದಂತೆ ಮೇ ತಿಂಗಳೊಳಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ಯೋಜನೆಗಳನ್ನು ಹಾಕಿಕೊಂಡಿದೆ.