ಶಿಕ್ಷಣ

ಪಿಯುಸಿ ಬಳಿಕ ಡಿಪ್ಲೊಮಾ 2ನೇ ವರ್ಷಕ್ಕೆ ಸೇರಲು ಅವಕಾಶ…!

By admin

June 17, 2019

ಬೆಂಗಳೂರು: ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ 2ನೇ ವರ್ಷಕ್ಕೆ ದಾಖಲಾಗಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಬ್ರಿಡ್ಜ್ ಕೋರ್ಸ್‌ ಕೂಡ ಸಿದ್ಧವಾಗುತ್ತಿದೆ. ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್‌ ಎಂಟ್ರಿ ಮೂಲಕ ಎಂಜಿನಿಯರಿಂಗ್‌ ಎರಡನೇ ವರ್ಷಕ್ಕೆ ಸೇರಿಕೊಳ್ಳಲು ಈ ವರೆಗೂ ಅವಕಾಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ದಾಖಲಾಗಲು ಅವಕಾಶ ನೀಡಿದೆ.

ನೇರವಾಗಿ ಎರಡನೇ ವರ್ಷಕ್ಕೆ ಸೇರುವ ವಿದ್ಯಾರ್ಥಿಗಳು ಡಿಪ್ಲೊಮಾ ಮೊದಲನೇ ವರ್ಷದಲ್ಲಿ ಇರುವ ತಾಂತ್ರಿಕ ವಿಷಯಗಳಲ್ಲಿ ಪರಿಣತಿ ಹೊಂದಿರುವುದಿಲ್ಲ. ಈ ಕಾರಣ ಕ್ಕಾಗಿ ಅಂತಹ ವಿದ್ಯಾರ್ಥಿಗಳಿಗೆ ತಾಂತ್ರಿಕ ಮಾಹಿತಿ ನೀಡಲು ಬ್ರಿಡ್ಜ್ ಕೋರ್ಸ್‌ ನೀಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು.

ಸಮಿತಿ ರಚನೆ ಬ್ರಿಡ್ಜ್ ಕೋರ್ಸ್‌ ಹೇಗಿರಬೇಕು ಎಂಬುದಕ್ಕೆ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಒಳಗೊಂಡಿರುವ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿದೆ. ಸಿವಿಲ್‌ ಎಂಜಿನಿಯರಿಂಗ್‌, ಪರಿಸರ ವಿಜ್ಞಾನ, ಪಿಎಚ್‌ಇ, ವಾಟರ್‌ ಟೆಕ್ನಾಲಜಿ ಮತ್ತು ಆರೋಗ್ಯ ವಿಜ್ಞಾನ ಬ್ರಿಡ್ಜ್ ಕೋರ್ಸ್‌ಗೆ ಐದು ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಆಟೋಮೊಬೈಲ್‌, ಏರೋ ನಾಟಿಕ್‌, ಮೆಕಾಟ್ರನಿಕ್ಸ್‌ ಮೊದಲಾದ ಎಂಜಿನಿಯರಿಂಗ್‌ ವಿಭಾಗಗಳ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್‌ ಸಿದ್ಧಪಡಿಸಲು 12 ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ. ಇತರ ವಿಷಯಗಳಿಗೆ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಒಟ್ಟು 7 ಸಮಿತಿಯ ಸದಸ್ಯರು ಜೂ. 20 ರಂದು ಸಭೆ ಸೇರಿ ಬ್ರಿಡ್ಜ್ ಕೋರ್ಸ್‌ಗಳ ಬಗ್ಗೆ ಚರ್ಚಿಸಿ ವರದಿ ಸಲ್ಲಿಸಲಿದ್ದಾರೆ. ಅದರಂತೆ ಇಲಾಖೆ ಬ್ರಿಡ್ಜ್ ಕೋರ್ಸ್‌ ನಿಗದಿಪಡಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನಿದು ಬ್ರಿಡ್ಜ್ ಕೋರ್ಸ್‌? ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪಿಯುಸಿ ಮುಗಿದ ವಿದ್ಯಾರ್ಥಿಗಳು ನೇರ ವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ಸೇರಲು ಅವಕಾಶ ನೀಡುವುದರಿಂದ ಮೊದಲ ವರ್ಷದ ಎರಡು ಸೆಮಿಸ್ಟರ್‌ಗಳು ಸಿಗುವುದಿಲ್ಲ. ಆ ಪಠ್ಯದ ತಾಂತ್ರಿಕ ಅಂಶ ಗಳನ್ನು ಅತ್ಯಂತ ಸುಲಭ ಮತ್ತು ಸರಳವಾಗಿ ವಿದ್ಯಾರ್ಥಿಗಳಿಗೆ ತಿಳಿಸಲು ಬ್ರಿಡ್ಜ್ ಕೋರ್ಸ್‌ ನೀಡಲಾಗುತ್ತದೆ. ನೇರವಾಗಿ ಎರಡನೇ ವರ್ಷದ ಡಿಪ್ಲೊಮಾ ಕೋರ್ಸ್‌ಗೆ ಸೇರುವ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಬ್ರಿಡ್ಜ್ ಕೋರ್ಸ್‌ ಪಡೆಯಬೇಕಾಗುತ್ತದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.