ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ.
ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ. ಕಚೇರಿಗೆ ಹೋದ ಸಂದರ್ಭದಲ್ಲಿ ಮೊದಲು ಡಿಎಲ್ ಮಾಡಿಸಿದ್ದ ಆರ್.ಟಿ.ಓ. ಕಚೇರಿಯಿಂದ ಎನ್ಒಸಿ ತರುವಂತೆ ಸೂಚಿಸಲಾಗುತ್ತಿದೆ.
ಈಗ ಸಾರಥಿ ತಂತ್ರಾಂಶ ಬಳಸುತ್ತಿದ್ದು, ಈ ಮೂಲಕ ಎಲ್.ಎಲ್.ಆರ್. ಮತ್ತು ಡಿಎಲ್ ನೀಡಲಾಗುತ್ತಿದೆ. ಡಿಎಲ್ ಪಡೆದ ವ್ಯಕ್ತಿಯ ಮಾಹಿತಿ ಆನ್ ಲೈನ್ ನಲ್ಲಿ ಸಿಗುವುದರಿಂದ ಇನ್ನು ಮುಂದೆ ಡಿಎಲ್ ನವೀಕರಣ ಮತ್ತು ಡಿಎಲ್ ನಲ್ಲಿ ವಿಳಾಸ ಬದಲಾವಣೆಗೆ ಎನ್ಒಸಿ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ.
ಯಾವುದೇ ಆರ್.ಟಿ.ಓ. ಕಚೇರಿಯಲ್ಲಿ ನೀಡಿದ ಡಿಎಲ್ ದೇಶಾದ್ಯಂತ ಮಾನ್ಯತೆ ಹೊಂದಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಆನ್ ಲೈನ್ ಮೂಲಕವೇ ಡಿಎಲ್ ಮಾಹಿತಿ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಸಾರಥಿ ಡೇಟಾ ಬೇಸ್ ಬಳಸಿಕೊಂಡು ಅರ್ಜಿದಾರರ ಮಾಹಿತಿ ಪರಿಶೀಲಿಸಿ ಡಿಎಲ್ ನವೀಕರಣ ಅಥವಾ ವಿಳಾಸ ಬದಲಾವಣೆಯನ್ನು ಮಾಡಿಕೊಡಬೇಕು ಎಂದು ತಿಳಿಸಲಾಗಿದೆ.